ಮೋದಿಜೀ, ನಿಮ್ಮ ಬಣ್ಣದ ಮಾತಿನಿಂದ ಜನರ ಹೊಟ್ಟೆ ತುಂಬುವುದಿಲ್ಲ: ಸೋನಿಯಾ ಗಾಂಧಿ

ಪ್ರಧಾನಿ ಮೋದಿ ಅವರ ಭಾಷಣಗಳು ಬಡವರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹರಿಹಾಯ್ದರು.   

Last Updated : May 8, 2018, 06:57 PM IST
ಮೋದಿಜೀ, ನಿಮ್ಮ ಬಣ್ಣದ ಮಾತಿನಿಂದ ಜನರ ಹೊಟ್ಟೆ ತುಂಬುವುದಿಲ್ಲ: ಸೋನಿಯಾ ಗಾಂಧಿ title=

ವಿಜಯಪುರ: ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮೋದಿ ಅವರ ಭಾಷಣಗಳು ಬಡವರ ಹೊಟ್ಟೆ ತುಂಬಿಸುವುದಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. 

ಇಂದಿಲ್ಲಿ ನಡೆದ ಕಾಂಗ್ರೆಸ್ ಸಮಾವೇಷವನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಮೋದಿಜೀ ಅವರು ಒಳ್ಳೇ ಮಾತುಗಾರರು. ಆದರೆ ಈ ಮಾತುಗಳಿಂದ ದೇಶದ ಅಭಿವೃದ್ಧಿ ಸಾಧ್ಯವೇ? ಜನರ ಏಳಿಗೆ ಸಾಧ್ಯವೇ? ಕೇವಲ ಭಾಷಣಗಳಿಂದ ಏನಾಗುತ್ತೆ ಮೋದಿಜಿ ಜನರಿಗೆ ಅನ್ನ, ನೀರು, ವಸತಿ ಬೇಕು. ಯುವಜನರಿಗೆ ಉದ್ಯೋಗ ಬೇಕು. ಹಳ್ಳಿಗಳಿಗೆ ಆಸ್ಪತ್ರೆ ಸೇವೆ ಬೇಕು. ನಿಮ್ಮ ಬಣ್ಣದ ಮಾತುಗಳಿಂದ ಇದೆಲ್ಲಾ ಸಾಧ್ಯವೇ? ಎಂದು ವಾಗ್ದಾಳಿ ನಡೆಸಿದರು. 

ನಮ್ಮ ದೇಶದಲ್ಲಿ ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿರಲಿಲ್ಲ. ಜನರ ಬದುಕು ದುಸ್ತರವಾಗಿದೆ. ಪೆಟ್ರೊಲಿಯಂ ಉತ್ಪನ್ನಗಳ ಬೆಲೆ ಒಂದೇ ಸಮನೆ ಜಾಸ್ತಿ ಆಗ್ತಿದೆ. ಇದರಿಂದ ಜನರ ಬದುಕು ದುಸ್ತರವಾಗಿದೆ. ಮಹಿಳೆಯರು, ಬಾಲಕಿಯರು, ದಲಿತರ ಸುರಕ್ಷೆಗೆ ಮೋದಿಜಿ ನಾಲ್ಕು ವರ್ಷಗಳಲ್ಲಿ ಏನು ಮಾಡಿದ್ದೀರಿ? ರೈತರಿಗಾಗಿ ಏನು ಮಾಡಿದಿರಿ? ಬರಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ನೀಡಿದ ಪರಿಹಾರದಲ್ಲಿ ಕರ್ನಾಟಕಕ್ಕೆ ದೊರೆತದ್ದು ಅತೀ ಕಡಿಮೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ನಿಮ್ಮ 'ಸಬ್ ಕಾ ಸಾಥ್ ಸಬ್ ಕಾ ವಿಕಾಸವೇ'? ಎಂದು ಪ್ರಶ್ನಿಸಿದರು. 

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ,  ರೈತರಿಗಾಗಿ ಸ್ವಂತ ಬಲದ ಯೋಜನೆ ರೂಪಿಸಿದರು. ಇವತ್ತು ಕರ್ನಾಟಕವು ಹಣ್ಣು ಮತ್ತು ಮಸಾಲೆ ಪದಾರ್ಥ ರಫ್ತು ಮಾಡುವ ಮುಖ್ಯ ರಾಜ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿದ್ದರೆ ಅದನ್ನು ಮೋದಿ ಸರ್ಕಾರ ಹಾಳು ಮಾಡುತ್ತಿದೆ. "ಮೋದಿಜಿ, ಕಾಂಗ್ರೆಸ್ ಮುಕ್ತ ಭಾರತದ ವಿಚಾರ ಅಂತೀರಲ್ಲ, ಮೊದಲು ನಿಮ್ಮ ಸ್ಥಾನದ ಬಗ್ಗೆ ಯೋಚಿಸಿ" ಎಂದು ಸೋನಿಯಾ ವ್ಯಂಗ್ಯವಾಡಿದರು. 

ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಶ್ಲಾಘಿಸಿದ ಸೋನಿಯಾ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮತ್ತು ಕೃಷಿ ಯಂತ್ರಧಾರೆ ಯೋಜನೆಗಳು ಕೋಟಿ ಕೋಟಿ ಜನರ ಜೀವನವನ್ನು ಸುಧಾರಿಸಿವೆ. ಉತ್ತಮ ಪೌಷ್ಟಿಕ ಆಹಾರ ಸೇವಿಸುವುದು ಪ್ರತಿಯೊಬ್ಬರ ಹಕ್ಕು ಎಂದು ಅರಿತಿರುವ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ಹಸಿದವರಿಗೆ ಆಹಾರ ನೀಡಿದೆ ಎಂದು ಹೇಳಿದರು.

2016 ರ ಆಗಸ್ಟ್ 2 ರಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ಹೊರಗುಳಿದಿದ್ದ 71 ವರ್ಷದ ಸೋನಿಯಾ ಗಾಂದಿ ಅವರು, 2017 ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆ ಪ್ರಚಾರದಲ್ಲೂ ಪಾಲ್ಗೊಂಡಿರಲಿಲ್ಲ. ಅಷ್ಟೇ ಅಲ್ಲದೆ, ನಂತರ ನಡೆದ ಪಂಜಾಬ್, ಗೋವಾ, ಉತ್ತರಾಖಂಡ್, ಮಣಿಪುರ (ಫೆಬ್ರುವರಿ-ಮಾರ್ಚ್ 2017), ಗುಜರಾತ್ ಮತ್ತು ಹಿಮಾಚಲ ಪ್ರದೇಶ (ಡಿಸೆಂಬರ್ 2017), ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ (ಫೆಬ್ರವರಿ 2018) ವಿಧಾನಸಭೆ ಚುನಾವಣಾ ಪ್ರಚಾರದಿಂದಲೂ ದೂರ ಉಳಿದಿದ್ದರು. 

ಆದರೆ, 2 ವರ್ಷಗಳ ನಂತರ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ವಿಜಯಪುರದಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ಗೆ ಮತ ಹಾಕುವಂತೆ ಜನತೆಗೆ ಕರೆ ನೀಡಿದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಮೇ 12 ರಂದು ನಡೆಯದ್ದು, ಮೇ 15 ರಂದು ಮತ ಎಣಿಕೆ ನಡೆಯಲಿದೆ. 

Trending News