ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಮೊನ್ನೆಯಷ್ಟೇ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿಂದು ವಿಶ್ವಾಸಮತ ಯಾಚಿಸಲಿದ್ದಾರೆ. ಸಚಿವ ಸಂಪುಟ ರಚನೆ ಹಗ್ಗ-ಜಗ್ಗಾಟದ ನಡುವೆಯೇ ಇಂದು ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಸಿದ್ದರಾಗಿದ್ದು, ವಿಶ್ವಾಸಮತ ಸಾಬೀತು ಪಡಿಸುವ ಭರವಸೆಯಲ್ಲಿದ್ದಾರೆ.
ಇಂದು ಮಧ್ಯಾಹ್ನ 12:15ರಿಂದ ವಿಧಾನಸಭೆ ಕಲಾಪ ಆರಂಭವಾಗಲಿದ್ದು, ಮೊದಲಿಗೆ ಸ್ಪೀಕರ್ ಆಯ್ಕೆ ನಡೆಯುತ್ತದೆ. ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಶ್ರೀನಿವಾಸಪುರ ಕ್ಷೇತ್ರದ ಕೆ.ಆರ್. ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯಿಂದ ರಾಜಾಜಿ ನಗರದ ಶಾಸಕರಾಗಿರುವ ಸುರೇಶಕುಮಾರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಬಹುಮತ ಸಾಬೀತಿಗೆ ಮೊದಲೇ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಸವಾಲನ್ನು ಜೆಡಿಎಸ್–ಕಾಂಗ್ರೆಸ್ ಮೈತ್ರಿಕೂಟ ಎದುರಿಸಬೇಕಾಗಿದೆ.
ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತ ಪ್ರಸ್ತಾವವನ್ನು ಮಂಡಿಸಲಿದ್ದಾರೆ. ಸದನದಲ್ಲಿರುವ ಸದಸ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಮತಗಳು ಬಂದರೆ ಪ್ರಸ್ತಾವಕ್ಕೆ ಅಂಗೀಕಾರ ಸಿಕ್ಕಿ ವಿಶ್ವಾಸಮತ ಸಾಬೀತಾಗುತ್ತದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಇನ್ನೂ ಆಪರೇಷನ್ ಕಮಲದ ಭೀತಿ ಇರುವುದರಿಂದ ಉಭಯ ಪಕ್ಷಗಳ ಶಾಸಕರುಗಳು ಇನ್ನೂ ರೆಸಾರ್ಟ್ ನಿಂದ ಹೊರಬಂದಿಲ್ಲ. ಸ್ಪೀಕರ್ ಚುನಾವಣೆ ಮತ್ತು ವಿಶ್ವಾಸಮತ ಯಾಚನೆಗೆ ಶಾಸಕರು ರೆಸಾರ್ಟ್ ನಿಂದಲೇ ನೇರವಾಗಿ ಬರಲಿದ್ದಾರೆ. ಬಹುಮತ ಸಾಬೀತುಗೊಳಿಸಿದ ಬಳಿಕವಷ್ಟೇ ಶಾಸಕರಿಗೆ ರೆಸಾರ್ಟ್ ವಾಸ್ತವ್ಯದಿಂದ ಮುಕ್ತಿ ಸಿಗಲಿದೆ.