ಇಂಡೋನೇಷ್ಯಾ: ಪತಿ ತನ್ನ ಮೊಬೈಲ್ ಪಾಸ್ ವಾರ್ಡ್ ನೀಡದ ಕಾರಣಕ್ಕೆ ಪತ್ನಿ ಆತನನ್ನು ಜೀವಂತ ಸುಟ್ಟುಹಾಕಿದ ಘಟನೆ ಇಂಡೋನೇಷ್ಯಾದ ಈಸ್ಟ್ ಲೊಂಬೊಕ್ ರಿಜೆನ್ಸಿಯಲ್ಲಿ ನಡೆದಿದೆ.
ಮೃತನನ್ನು ದೀದಿ ಪುರ್ನಾಮ(26) ಎಂದು ಗುರುತಿಸಲಾಗಿದೆ. ಮನೆಯ ಮನೆಯ ಹಂಚುಗಳನ್ನು ಸರಿಮಾಡುವ ಕೆಲಸ ಮಾಡುತ್ತಿದ್ದ ಪತಿಯ ಬಳಿ ಬಂದ ಪತ್ನಿ ಇಲ್ಲಾಂ ಕಹ್ಯಾನಿ, ಆತನ ಮೊಬೈಲ್ ಪಾಸ್ವರ್ಡ್ ಕೇಳಿದ್ದಾಳೆ. ಆದರೆ, ಪತಿ ಪಾಸ್ವರ್ಡ್ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ಆರಂಭವಾಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕೋಪಗೊಂಡ ಪತ್ನಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಮೈತುಂಬಾ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪುರ್ನಾಮನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಎರಡು ದಿನಗಳ ಬಳಿಕ ಆತ ಮೃತಪಟ್ಟಿದ್ದಾನೆ.
ಪತಿಯನ್ನೇ ಜೀವಂತ ಸುಟ್ಟುಹಾಕಿದ ಪತ್ನಿ ಕಹ್ಯಾನಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.