ನವದೆಹಲಿ: ಕಳೆದ ಕೆಲ ದಿನಗಳಿಂದ ಗಗನಮುಖಿಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರಗಳು ಕೊನೆಗೂ ಇಳಿಕೆಯತ್ತ ಮುಖಮಾಡಿವೆ. ಮಂಗಳವಾರ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ 10ಗ್ರಾಮ್ ಚಿನ್ನದ ಬೆಲೆಯಲ್ಲಿ ರೂ. 170 ಕಡಿಮೆಯಾಗಿ 41,800ಕ್ಕೆ ಬಂದು ತಲುಪಿದೆ. ಇದೇ ವೇಳೆ ಪ್ರತಿ ಕೆ.ಜಿ ಬೆಳ್ಳಿ ಬೆಲೆಯೂ ಕೂಡ ರೂ.700ರವರೆಗೆ ಕಡಿಮೆಯಾಗಿದೆ. ಸದ್ಯ ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳಿಯ ಬೆಲೆ 48,800ಕ್ಕೆ ಬಂದು ತಲುಪಿದೆ.
ಈ ಕಾರಣದಿಂದ ಗಗನಮುಖಿಯಾಗಿದ್ದವು ಚಿನ್ನ, ಬೆಳ್ಳಿಯ ದರಗಳು
ಅಮೇರಿಕಾ ಹಾಗೂ ಇರಾನ್ ಮಧ್ಯೆ ಏರ್ಪಟ್ಟ ವೈಮನಸ್ಯದ ಕಾರಣ ಸೋಮವಾರ ಪ್ರತಿ ಹತ್ತು ಗ್ರಾಮ್ ಚಿನ್ನದ ಬೆಲೆ ರೂ.41,970ರ ರಿಕಾರ್ಡ್ ಮಟ್ಟಕ್ಕೆ ತಲುಪಿತ್ತು. ಇರಾನ್ ವತಿಯಿಂದ ಯಾವುದೇ ಪ್ರತಿದಾಳಿ ನಡೆದಿಲ್ಲವಾದ್ದರಿಂದ ಪರಿಸ್ಥಿತಿ ಸ್ವಲ್ಪ ತಿಳಿಯಾಗಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಸಾಕಷ್ಟು ಲಾಭಗಳಿಸಿದ್ದಾರೆ. ಡಾಲರ್ ಎದುರು ರೂಪಾಯಿಯ ಮೌಲ್ಯ ಬಲವರ್ಧನೆ ಕೂಡ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂತಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಪ್ರತಿ ಔನ್ಸ್ 1,582.59$ ತಲುಪಿದ ಬಳಿಕ ಮಂಗಳವಾರ ಕುಸಿತ ಕಂಡು ಪ್ರತಿ ಔನ್ಸ್ ಗೆ 1,563.50$ ತಲುಪಿದೆ. ಇದರ ನೇರ ಪರಿಣಾಮ ಭಾರತದ ಸ್ಥಳೀಯ ಮಾರುಕಟ್ಟೆಗಳ ಮೇಲೆ ಕಂಡುಬರುತ್ತಿದೆ. ಬೆಳ್ಳಿಯ ಬೆಲೆಯೂ ಕೂಡ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಗೆ 0.07$ ಏರಿಕೆ ಕಂಡು 18.16 $ಗೆ ಬಂದು ತಲುಪಿದೆ. ನೆರೆರಾಷ್ಟ್ರ ಪಾಕಿಸ್ತಾನದಲ್ಲಿ ಜನವರಿ 6ರಂದು ಪ್ರತಿ 10ಗ್ರಾಮ್ ಚಿನ್ನದ ಬೇಳೆ ರೂ.93,400ಕ್ಕೆ ತಲುಪಿದೆ.