ಇಸ್ಲಾಮಾಬಾದ್ : ರಾಷ್ಟ್ರ ರಾಜಧಾನಿಯ ಹೊರ ವಲಯದಲ್ಲಿ ಕಳೆದ ವಾರ ಪ್ರತಿಭಟನಕಾರರೊಂದಿಗೆ ಭಾರೀ ಹಿಂಸಾತ್ಮಕ ಕಾದಾಟ ಉಂಟಾಗಲು ಪ್ರತಿಭಟನಕಾರರು ಅತ್ಯಂತ ಪ್ರಚೋದನಾತ್ಮಕ ರೀತಿಯಲ್ಲಿ ಭಾಷಣ ಮಾಡಿ ಭದ್ರತಾ ಸಿಬಂದಿಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದೇ ಕಾರಣ ಎಂದು ಇಸ್ಲಾಮಾಬಾದ್ ಪೊಲೀಸರು ಪಾಕ್ ಸುಪ್ರೀಂ ಕೋರ್ಟಿಗೆ ಹೇಳಿದ್ದಾರೆ.
ಕಳೆದ ವಾರ ರಾಜಧಾನಿ ಇಸ್ಲಾಮಾಬಾದ್ ತಲುಪುವ ಮುಖ್ಯ ಹೆದ್ದಾರಿಯನ್ನು ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ತಡೆದಿದ್ದರು. ಅವರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಸುಮಾರು 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕಳೆದ ಸೆಪ್ಟಂಬರ್ನಲ್ಲಿ ಪಾಸಾಗಿದ್ದ 2017 ಚುನಾವಣಾ ಕಾಯಿದೆಯಲ್ಲಿ ಪ್ರವಾದಿತ್ವದ ಅಂತಿಮ ಪ್ರಮಾಣ ವಚನವಾದ ಖತ್ಮ್-ಇ-ನಬುವತ್ ಬಗ್ಗೆ ಬದಲಾವಣೆ ತಂದುದಕ್ಕಾಗಿ ಪಾಕ್ ಕಾನೂನು ಸಚಿವರ ಝಾಹಿದ್ ಹಮೀದ್ ಅವರ ರಾಜೀನಾಮೆಯನ್ನು ಪ್ರತಿಭಟನಕಾರರು ಆಗ್ರಹಿಸುತ್ತಿದ್ದರು.
ಈ ಕುರಿತು ದೇಶದ ಸುಪ್ರಿಂಕೋರ್ಟ್ನಲ್ಲಿ 9 ಪುಟಗಳ ವರದಿ ಸಲ್ಲಿಸಿರುವ ಇಸ್ಲಾಮಾಬಾದ್ ಪೊಲೀಸ್ ಪಡೆ, ಅದರಲ್ಲಿ ಪ್ರತಿಭಟನಕಾರರು ಅತ್ಯಂತ ಪ್ರಚೋದನಾತ್ಮಕ ರೀತಿಯಲ್ಲಿ ಭಾಷಣ ಮಾಡಿ ಭದ್ರತಾ ಸಿಬಂದಿಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದೇ ಪರಿಸ್ಥಿತಿ ಉದ್ವಿಘ್ನಗೊಳ್ಳಲು ಕಾರಣವಾಯಿತು ಎಂದು ಹೇಳಿದೆ. ಅಲ್ಲದೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 2000 ಕ್ಕೂ ಹೆಚ್ಚು ಪ್ರತಿಭಟನಾಕಾರರು ಕಲ್ಲುಗಳು, ಪಿಸ್ತೂಲ್, ಕತ್ತಿ ಮತ್ತು ರಾಡ್ಗಳನ್ನು ಹೊಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಇದಕ್ಕೂ ಮುನ್ನ ಪ್ರತಿಭಟನಕಾರರ ಉಗ್ರ ವಿರೋಧಕ್ಕೆ ಮಣಿದು ಪಾಕ್ ಸರಕಾರ ಕೊನೆಗೂ ಕಾನೂನು ಸಚಿವರ ರಾಜೀನಾಮೆಯನ್ನು ಪಡೆದಿತ್ತು.