ನವದೆಹಲಿ: ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಮುಂದಿನ ತಿಂಗಳು ಸುಸ್ಥಿರ ಮಾರುಕಟ್ಟೆಗಳು, ಹವಾಮಾನ ಬದಲಾವಣೆ ಮತ್ತು ಸಾಮಾಜಿಕ ಹಣಕಾಸು ವಿಷಯಗಳನ್ನು ಕೇಂದ್ರಿಕರಿಸಿ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ತಿಳಿಸಿದೆ.
70 ರ ಹರೆಯದ ಪ್ರಿನ್ಸ್ ಚಾರ್ಲ್ಸ್ ನವೆಂಬರ್ 13 ರ ಬುಧವಾರ ಎರಡು ದಿನಗಳ ಭೇಟಿಗಾಗಿ ನವದೆಹಲಿಗೆ ಆಗಮಿಸಲಿದ್ದಾರೆ. ಇದು ಚಾರ್ಲ್ಸ್ ಅವರ 10 ನೇ ಅಧಿಕೃತ ಭಾರತ ಪ್ರವಾಸವಾಗಿದೆ.
ಪ್ರಿನ್ಸ್ ಚಾರ್ಲ್ಸ್ ಕೊನೆಯದಾಗಿ 2017 ರ ನವೆಂಬರ್ನಲ್ಲಿ ಅವರ ಪತ್ನಿ ಕ್ಯಾಮಿಲ್ಲಾ, ಡಚೆಸ್ ಆಫ್ ಕಾರ್ನ್ವಾಲ್ ಅವರೊಂದಿಗೆ ಬ್ರೂನಿ, ಭಾರತ, ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ಜಂಟಿ ಪ್ರವಾಸದ ಭಾಗವಾಗಿ ಆಗಮಿಸಿದ್ದರು. ಸರ್ಕಾರದ ಆದ್ಯತೆಗಳ ಆಧಾರದ ಮೇಲೆ ವಿದೇಶಾಂಗ ಕಚೇರಿಯ ಕೋರಿಕೆಯ ಮೇರೆಗೆ ಈ ಭೇಟಿಯ ಕುರಿತು ಹೆಚ್ಚಿನ ವಿವರಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಅವರ ಕ್ಲಾರೆನ್ಸ್ ಹೌಸ್ ಕಚೇರಿ ಹೇಳಿದೆ.
ಯುರೋಪಿಯನ್ ಒಕ್ಕೂಟವನ್ನು ತೊರೆದ ನಂತರ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬ್ರಿಟನ್ ಉತ್ಸುಕವಾಗಿದೆ. ಪ್ರಿನ್ಸ್ ಚಾರ್ಲ್ಸ್ ಅವರ ಪುತ್ರ ವಿಲಿಯಂ ಮತ್ತು ಅವರ ಪತ್ನಿ ಕೇಟ್ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ನಾಲ್ಕು ದಿನಗಳ ಪ್ರವಾಸವನ್ನು ಪೂರ್ಣಗೊಳಿಸಿದ ಒಂದು ವಾರದ ನಂತರವೂ ಈ ಪ್ರಕಟಣೆ ಹೊರಬಿದ್ದಿದೆ.