ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅನಾರೋಗ್ಯದಿಂದ ಬಳಲುತ್ತಿದ್ದು ಇತ್ತೀಚೆಗೆ ದುಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನ ಮೂಲದ ಡಾನ್ ಸುದ್ದಿವಾಹಿನಿ ಪ್ರಕಾರ, ಮುಷರಫ್(75) ಅನಾರೋಗ್ಯಕ್ಕೆ ತುತ್ತಾಗಿದ್ದು ವಾರಾಂತ್ಯದಲ್ಲಿ ದುಬೈಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಷರಫ್ ಇತ್ತೀಚಿಗೆ ಸ್ವಲ್ಪ ಸಮಯದಿಂದ ಅಪರೂಪದ ಕಾಯಿಲೆ ವಿರುದ್ಧ ಹೋರಾಡುತ್ತಿದ್ದು, ಶನಿವಾರ ಹಠಾತ್ತನೆ ಅವರ ಆರೋಗ್ಯ ಹದಗೆಟ್ಟಿದೆ. ಪರ್ವೇಜ್ ಮುಷರಫ್ ಗೆ ಸಂಪೂರ್ಣ ಬೆಡ್ ರೆಸ್ಟ್ ಅಗತ್ಯವಿದೆ ಎಂದು ದುಬೈ ವೈದ್ಯರು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ, ಮುಷರಫ್ ನರಮಂಡಲಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕಾಗಿ ಲಂಡನ್ ನಲ್ಲಿ ಅವರು ಚಿಕಿತ್ಸೆ ಪಡೆದಿದ್ದರು.