ಇಸ್ಲಾಮಾಬಾದ್: ತರಬೇತಿ ಹಾರಾಟದಲ್ಲಿದ್ದ ಪಾಕಿಸ್ತಾನದ ಮಿಲಿಟರಿ ವಿಮಾನವು ಮಂಗಳವಾರ ಮುಂಜಾನೆ ಗ್ಯಾರಿಸನ್ ನಗರದ ರಾವಲ್ಪಿಂಡಿಯಲ್ಲಿ ನಿರ್ಮಿಸಲಾದ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಎಲ್ಲಾ ಐವರು ಸಿಬ್ಬಂದಿ ಮತ್ತು 12 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.
ಬೆಂಕಿ ಕಾಣಿಸಿಕೊಂಡಿದ್ದರಿಂದ ಅಪಘಾತದಲ್ಲಿ ಇನ್ನೂ 12 ನಾಗರಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾವಲ್ಪಿಂಡಿ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ನೆಲೆಗೊಂಡಿರುವ, ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿದೆ.
ದಿ ನ್ಯೂಸ್ ಪತ್ರಿಕೆಯ ವೆಬ್‌ಸೈಟ್ ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಅಪಘಾತಕ್ಕೀಡಾದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಫೋಟೋವನ್ನು ತೋರಿಸಲಾಗಿದೆ. ಆದರೆ, ಈ ವಿಮಾನ ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮಿಲಿಟರಿ ಮತ್ತು ನಾಗರಿಕ ಪಾರುಗಾಣಿಕಾ ತಂಡಗಳು ಘಟನಾ ಸ್ಥಳದಲ್ಲಿದ್ದು ಬೆಂಕಿಯನ್ನು ನಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಸೇನೆಯ ಸಂವಹನ ವಿಭಾಗದ ಹೇಳಿಕೆ ತಿಳಿಸಿದೆ.