ಭಾರತೀಯ ಚಿತ್ರರಂಗದ ಹಿರಿಯ ಚಿತ್ರ ನಿರ್ಮಾಪಕ ನಿರ್ದೇಶಕ, ನಿರ್ಮಾಪಕ ಶಾಂತರಾಮ್ ರಾಜಾರಾಂ ವಣಕುಂದ್ರೆ ಅವರ 116ನೇ ಹುಟ್ಟುಹಬ್ಬದ ಸ್ಮರಣಾರ್ಥ ಶನಿವಾರ ಗೂಗಲ್ ವಿಶೇಷ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.
1901ರ ನವೆಂಬರ್ 18ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಜನಿಸಿದ್ದ ಶಾಂತಾರಾಮ್ ಅವರ 116ನೇ ಜನ್ಮದಿನದ ಹಿನ್ನೆಲೆಯಲ್ಲಿ ಗೂಗಲ್ ಮಾಡಿರುವ ಈ ವಿಶೇಷ ಡೂಡಲ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು, ತಮ್ಮ 18ನೇ ವಯಸ್ಸಿನಲ್ಲಿ ಮಹಾರಾಷ್ಟ್ರ ಫಿಲ್ಮ್ ಕಂಪನಿಗೆ ಸೇರ್ಪಡೆಗೊಂಡಿದ್ದರು. 1929ರಲ್ಲಿ ಬಿಡುಗಡೆಗೊಂಡ ಗೋಪಾಲಕೃಷ್ಣ ಚಿತ್ರ ಭಾರೀ ಯಶಸ್ವಿಯಾಗಿತ್ತು. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ 'ಅಯೋಧ್ಯಾ ಕಾ ರಾಜಾ' ಎಂಬ ದ್ವಿಭಾಷಾ ಸಿನಿಮಾವನ್ನು ನಿರ್ಮಿಸಿದ್ದರು. ಭಾರತೀಯ ಸಿನಿಮಾಕ್ಕೆ ಧ್ವನಿ ಮತ್ತು ಬಣ್ಣವನ್ನು ಮೊದಲು ಪರಿಚಯಿಸಿದವರೇ ವಿ.ಶಾಂತರಾಮ್ ಎಂಬುದು ಇಲ್ಲಿ ಗಮನಾರ್ಹ.
ಅಷ್ಟೇ ಅಲ್ಲದೆ, ದೋ ಆಂಖೇ ಬಾರಾ ಹಾಥ್, ಝನಕ್ ಝನಕ್ ಪಾಯಲ್ ಬಾಜೇ, ಅಮರ್ ಭೂಪಾಲಿ, ಜಲ್ ಮಿನ್ ಮಚ್ಲಿ ನೃತ್ಯ ಬಿನ್ ಬಿಜಲಿ, ನವರಂಗ್, ಪರಿಚಯ್ ನಂಥ ಮಹಾನ್ ಚಿತ್ರಗಳು ಶಾಂತಾರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. ಸಿನಿಮಾ ಕ್ಷೇತ್ರದಲ್ಲಿನ ಅವರ ಜೀವಮಾನ ಸಾಧನೆಗಾಗಿ 1986ರಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿಗಳೂ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.