ತನ್ನನ್ನು ಅವಲಂಬಿಸಿರುವ ದೇಶಗಳು "ಆಗದು' ಎಂದು ಹೇಳುವುದನ್ನು ಚೀನಾ ಎಂದಿಗೂ ಸಹಿಸುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನ.
ಚೀನ ಈಚೆಗೆ ಪಾಕಿಸ್ಥಾನಕ್ಕೆ ಅದರ ಗಾದ್ವಾರ್ ಬಂದರಿನಲ್ಲಿ ತಾನು ನಡೆಸುವ ಎಲ್ಲ ವ್ಯಾಪಾರ ವಹಿವಾಟುಗಳನ್ನು ಚೀನದ "ಯುವಾನ್' ಕರೆನ್ಸಿಯಲ್ಲೇ ಮಾಡಬೇಕು ಎಂದು ತಾಕೀತು ಮಾಡಿತ್ತು. ಆದರೆ ಪಾಕಿಸ್ಥಾನ ಅದಕ್ಕೆ ಒಪ್ಪಿರಲಿಲ್ಲ.
ಇದರಿಂದ ಕುಪಿತಗೊಂಡ ಚೀನಾ ತಾನು ಸಿಪಿಇಸಿ ಯೋಜನೆಗೆ ಇನ್ನು ಹಣ ಒದಗಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು. ಮಾತ್ರವಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಅಣೆಕಟ್ಟಿಗೂ ತಾನಿನ್ನು ಹಣ ಪೂರೈಸುವುದಿಲ್ಲ ಎಂದು ಹೇಳಿತ್ತು.
ಆದರೀಗ ಚೀನಾದ ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಪಾಕಿಸ್ಥಾನ ಚೀನಾಕ್ಕೆ ಸಂಪೂರ್ಣವಾಗಿ ಮಣಿದು ಅದರ ಎಲ್ಲ ಶರತ್ತುಗಳನ್ನು ಒಪ್ಪಿಕೊಂಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇದು ಪಾಕಿಸ್ಥಾನದ ಸಾರ್ವಭೌಮತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಉಭಯ ದೇಶಗಳ ನಡುವಿನ ಆರ್ಥಿಕ ವಹಿವಾಟಿನ ಎಲ್ಲ ಲಾಭಗಳು ಚೀನಕ್ಕೆ ಸಿಗಲಿದ್ದು, ಸಿಪಿಇಸಿ ಯೋಜನೆ ನಿಜಕ್ಕೂ ಪಾಕಿಸ್ಥಾನಕ್ಕೆ ಬೇಕೇ ಎಂದು ಅಲ್ಲಿನ ಮಾಧ್ಯಮ ಪ್ರಶ್ನಿಸಿದೆ.
3.21 ಲಕ್ಷ ಕೋಟಿ ರೂ. ವೆಚ್ಚ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪೆಕ್) ಯೋಜನೆಯ ಭಾಗವಾಗಿ ಮೂರು ಪ್ರಮುಖ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕೆ 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಕಂಡ ಹಿನ್ನೆಲೆಯಲ್ಲಿ ಅನುದಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಚೀನಾ ನಿರ್ಧರಿಸಿತ್ತು.
ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 3.21 ಲಕ್ಷ ಕೋಟಿ ವೆಚ್ಚದ ಸಿಪೆಕ್ ಯೋಜನೆಯ ಭಾಗ ಇದಾಗಿದ್ದು, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಿಂದ ಪಾಕಿಸ್ತಾನದ ಬಲೂಚಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಿಂದ ರಸ್ತೆ ಹಾದು ಹೋಗುತ್ತದೆ.
ಈ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲತಃ ಪಾಕಿಸ್ತಾನ ಸರ್ಕಾರದ್ದೇ ಆದರೂ, 2016ರಲ್ಲಿ ಚೀನಾವು ಈ ಯೋಜನೆಗಳನ್ನೂ ತನ್ನ ಮಹತ್ವಾಕಾಂಕ್ಷಿ ಸಿಪೆಕ್ ಯೋಜನೆಗಳಡಿ ಸೇರಿಸಿಕೊಳ್ಳುವುದಾಗಿ ಘೋಷಿಸಿತ್ತು.
ಆದರೆ, ಸಿಪೆಕ್ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮಾಡಿದ ವರದಿಗಳನ್ನು ಗಮನಿಸಿ ಚೀನಾ ಅನುದಾನ ತಡೆಯ ಕಠಿಣ ನಿರ್ಧಾರಕ್ಕೆ ಬಂದಿತ್ತು.