ಇಸ್ಲಾಮಾಬಾದ್: ಪಾಕ್ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ಮಂಗಳವಾರ ಬೆಳಗಿನ ಜಾವ ನಡೆಸಿದ ವೈಮಾನಿಕ ದಾಳಿಗೆ ಬೆಚ್ಚಿ ಬಿದ್ದಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಅಲ್ಲಿನ ಸೈನಿಕರಿಗೆ ಮತ್ತು ಜನತೆಗೆ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ.
ಬಾಲಕೋಟ್ ಮೇಲೆ ಭಾರತಿಯ ವಾಯು ಸೇನೆ ನಡೆಸಿದ ವೈಮಾನಿಕ ದಾಳಿ ಬೆನ್ನಲ್ಲೇ ಇಂದಿಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ನಡೆಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತ ಆಕ್ರಮಣಕಾರಿ ನೀತಿ ಅನುಸರಿಸಿದರೆ ಪಾಕಿಸ್ತಾನ ಪ್ರತಿದಾಳಿ ನಡೆಸಲು ಸಿದ್ಧರಾಗಿರುವಂತೆ ಸಭೆಯಲ್ಲಿ ತಿಳಿಸಿದ್ದು, ನಾಳೆ ವಿಶೇಷ ಸಭೆ ನಡೆಸಲು ಪ್ರಧಾನಿ ಇಮ್ರಾನ್ ಖಾನ್ ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ"ಭಾರತ ಅನಪೇಕ್ಷಿತ ದಾಳಿ ನಡೆಸಿದೆ. ನಮ್ಮದೇ ಆಯ್ಕೆಯ ಸ್ಥಳ ಹಾಗೂ ಸಮಯದಲ್ಲಿ ಇದಕ್ಕೆ ಸೂಕ್ತ ತಿರುಗೇಟು ನೀಡುವ ಹಕ್ಕು ನಮಗಿದೆ" ಎಂದಿರುವ ಪಾಕಿಸ್ತಾನದ ಭದ್ರತಾ ಸಮಿತಿ, ಭಾರತದ ದಾಳಿಯಿಂದಾಗಿ ಹಲವರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ತಿರಸ್ಕರಿಸಿದೆ. ಅಲ್ಲದೆ, ಗಡಿಯಲ್ಲಿ ಬೇಜವಾಬ್ದಾರಿಯುತ ಭಾರತೀಯ ನೀತಿಯನ್ನು ಜಾಗತಿಕ ಮಟ್ಟದಲ್ಲಿ ಬಹಿರಂಗಪಡಿಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.