ಆಯುರ್ವೇದ ಎನ್ನುವುದು ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ಒಂದು ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಆಯುರ್ವೇದದ ಮೂಲಕವೇ ಹಲವಾರು ಚಿಕಿತ್ಸೆಗಳನ್ನು ನೀಡಿ ರೋಗ ಗುಣಪಡಿಸಲಾಗುತ್ತದೆ. ರೋಗ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡುವ ಬದಲು ರೋಗ ಬರದಂತೆ ತಡೆಯುವುದು ಒಳ್ಳೆಯದು ಎನ್ನುವ ಮಾತಿದೆ. ಅದೇ ರೀತಿಯಾಗಿ ಆಯುರ್ವೇದ ಕೂಡ ಹಲವಾರು ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗ ಬರದಂತೆ ತಡೆಯುವುದು. ದೇಹ, ಮನಸ್ಸು ಮತ್ತು ಪ್ರಜ್ಞೆಯು ಸಮತೋಲನದಲ್ಲಿದ್ದರೆ ಆಗ ಆರೋಗ್ಯ ಪಡೆಯಬಹುದು ಎಂದು ಆಯುರ್ವೇದವು ಹೇಳುತ್ತದೆ. ಇದನ್ನು ಪಡೆಯುವ ಸಲುವಾಗಿ ದಿನನಿತ್ಯ ವ್ಯಾಯಾಮ, ಭಾವನಾತ್ಮಕ ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆಯು ಅತೀ ಅಗತ್ಯವಾಗಿರುವುದು.