ಬೋಯಿಂಗ್ ವಿಸ್ತರಣಾ ಘಟಕಕ್ಕೆ ಬೆಂಗಳೂರಿನ ಆತಿಥ್ಯ

ಬೋಯಿಂಗ್ ಭಾರತೀಯ ಮಿಲಿಟರಿಯೊಡನೆ ಕೈ ಜೋಡಿಸಿ, ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ವಿಮಾನದ ಬೇಡಿಕೆಯನ್ನು ಪೂರೈಸಲು ಮತ್ತು 'ಆತ್ಮನಿರ್ಭರ ಭಾರತ' ಯೋಜನೆಯನ್ನು ಬೆಂಬಲಿಸಲು ಯೋಜಿಸುತ್ತಿದೆ.

Written by - Girish Linganna | Last Updated : Jan 19, 2024, 08:47 AM IST
  • ಈ ಕಾರ್ಯಕ್ರಮ ಬಾಲಕಿಯರು ಮತ್ತು ಹೆಣ್ಣು ಮಕ್ಕಳಿಗೆ ಪ್ರಮುಖ ಎಸ್‌ಟಿಇಎಂ ಕೌಶಲಗಳನ್ನು ಸಂಪಾದಿಸಲು ಅವಕಾಶ ಕಲ್ಪಿಸಲಿದ್ದು, ಅವರನ್ನು ವೈಮಾನಿಕ ಉದ್ಯೋಗಗಳಿಗೆ ಸಿದ್ಧಗೊಳಿಸಲಿದೆ.
  • ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಎಸ್‌ಟಿಇಎಂ ಪ್ರಯೋಗಾಲಯಗಳನ್ನು ತೆರೆಯಲಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿವೆ.
  • ಅದರೊಡನೆ, ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಬಾಲಕಿಯರಿಗೂ ವಿದ್ಯಾರ್ಥಿ ವೇತನ ಒದಗಿಸಲಿದೆ.
ಬೋಯಿಂಗ್ ವಿಸ್ತರಣಾ ಘಟಕಕ್ಕೆ ಬೆಂಗಳೂರಿನ ಆತಿಥ್ಯ title=

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾದಿಂದ ಹೊರಗೆ, ಬೋಯಿಂಗ್ ಸಂಸ್ಥೆಯ ಅತಿದೊಡ್ಡ ಘಟಕವನ್ನು ಬೆಂಗಳೂರಿನಲ್ಲಿ ಶುಕ್ರವಾರ ಉದ್ಘಾಟಿಸಲಿದ್ದಾರೆ. 1,600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ನೂತನ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) 43 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ವ್ಯಾಪಿಸಿದೆ.

ನೂತನವಾಗಿ ಉದ್ಘಾಟನೆಗೊಳ್ಳುತ್ತಿರುವ ಈ ಘಟಕದ ಕುರಿತ ಒಂದಷ್ಟು ಸ್ಥೂಲ ಮಾಹಿತಿಗಳು ಇಲ್ಲಿವೆ. ಈ ಸಂಸ್ಥೆ ಭಾರತೀಯ ಪ್ರತಿಭೆಗಳನ್ನು ಸ್ವಾಗತಿಸಲಿದ್ದು, ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾಥ್ಸ್ - ಎಸ್‌ಟಿಇಎಂ) ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಲಿದೆ.

ಬಿಐಇಟಿಸಿ ಭಾರತದಲ್ಲಿ ಬೋಯಿಂಗ್‌‌ ಸಂಸ್ಥೆಯ ಅತಿದೊಡ್ಡ ವಿಭಾಗವಾಗಿದೆ. ಭಾರತ ಸರ್ಕಾರ ಇದು ದೇಶದ ಸ್ಟಾರ್ಟಪ್‌ಗಳು, ಖಾಸಗಿ ವಲಯ ಮತ್ತು ಸರ್ಕಾರದೊಡನೆ ಕಾರ್ಯಾಚರಿಸಲಿದೆ ಎಂದು ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ, ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ನೂತನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು  ದೇಶಾದ್ಯಂತ ಹೆಚ್ಚು ಹೆಣ್ಣು ಮಕ್ಕಳು ವೈಮಾನಿಕ ವಲಯಕ್ಕೆ ಸೇರಲು ನೆರವಾಗುವ ಉದ್ದೇಶ ಹೊಂದಿರುವ ಬೋಯಿಂಗ್ ಸುಕನ್ಯಾ ಯೋಜನೆಯನ್ನು ಆರಂಭಿಸಲಿದ್ದಾರೆ.

ಈ ಕಾರ್ಯಕ್ರಮ ಬಾಲಕಿಯರು ಮತ್ತು ಹೆಣ್ಣು ಮಕ್ಕಳಿಗೆ ಪ್ರಮುಖ ಎಸ್‌ಟಿಇಎಂ ಕೌಶಲಗಳನ್ನು ಸಂಪಾದಿಸಲು ಅವಕಾಶ ಕಲ್ಪಿಸಲಿದ್ದು, ಅವರನ್ನು ವೈಮಾನಿಕ ಉದ್ಯೋಗಗಳಿಗೆ ಸಿದ್ಧಗೊಳಿಸಲಿದೆ. ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಎಸ್‌ಟಿಇಎಂ ಪ್ರಯೋಗಾಲಯಗಳನ್ನು ತೆರೆಯಲಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿವೆ. ಅದರೊಡನೆ, ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಬಾಲಕಿಯರಿಗೂ ವಿದ್ಯಾರ್ಥಿ ವೇತನ ಒದಗಿಸಲಿದೆ.

ಬಿಐಇಟಿಸಿ ಜಾಗತಿಕವಾಗಿ ಏರೋಸ್ಪೇಸ್ ಉದ್ಯಮದ ಪ್ರಗತಿಗಾಗಿ ಕಾರ್ಯಾಚರಿಸಲು 3,000ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ಹೊಂದುವ ಗುರಿ ಹಾಕಿಕೊಂಡಿದೆ. ಈ ಇಂಜಿನಿಯರ್‌ಗಳು ಸಂಶೋಧನೆ ಮತ್ತು ಅಭಿವೃದ್ಧಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾಗಿಯಾಗಿ, ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಾಡೆಲ್ ಆಧಾರಿತ ಇಂಜಿನಿಯರಿಂಗ್, ಮತ್ತು ಅಡ್ಡಿಟಿವ್ ಉತ್ಪಾದನೆಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಬೋಯಿಂಗ್ ಹೇಳಿದೆ.

ಬೋಯಿಂಗ್ ಭಾರತೀಯ ಮಿಲಿಟರಿಯೊಡನೆ ಕೈ ಜೋಡಿಸಿ, ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ವಿಮಾನದ ಬೇಡಿಕೆಯನ್ನು ಪೂರೈಸಲು ಮತ್ತು 'ಆತ್ಮನಿರ್ಭರ ಭಾರತ' ಯೋಜನೆಯನ್ನು ಬೆಂಬಲಿಸಲು ಯೋಜಿಸುತ್ತಿದೆ.

ಬೋಯಿಂಗ್ ಈಗಾಗಲೇ ಭಾರತದ ವಿವಿಧ ನಗರಗಳಲ್ಲಿ 107 ಔದ್ಯೋಗಿಕ ಹುದ್ದೆಗಳನ್ನು ತೆರೆದಿದ್ದು, ಅವುಗಳಲ್ಲಿ 97 ಬೆಂಗಳೂರಿನಲ್ಲಿವೆ. ಬೆಂಗಳೂರು ಬಿಐಇಟಿಸಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಬಿಲ್ಲಿಂಗ್ ಅನಲಿಸ್ಟ್‌ಗಳು, ಮತ್ತಿತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಬೋಯಿಂಗ್ ಇಂಡಿಯಾ ತನ್ನ 2023-24ನೇ ಸಾಲಿನ ಬೋಯಿಂಗ್ ಯುನಿವರ್ಸಿಟಿ ಇನೋವೇಶನ್ ಲೀಡರ್‌ಶಿಪ್ ಡೆವಲಪ್‌ಮೆಂಟ್ (ಬಿಲ್ಡ್) ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಭಾರತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ನೂತನ ಸ್ಟಾರ್ಟಪ್‌ಗಳನ್ನು ಗುರಿಯಾಗಿಸಿದೆ. ಬೋಯಿಂಗ್ ಮೂರನೇ ಬಾರಿಗೆ ಈ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದ್ದು, ನೂತನ ಆಲೋಚನೆಗಳನ್ನು ಹುಟ್ಟುಹಾಕಲು ಮತ್ತು ವಿವಿಧ ಉದ್ಯಮಗಳಲ್ಲಿ ಮಾರುಕಟ್ಟೆ ಅವಕಾಶಗಳನ್ನು ನಿರ್ಮಿಸಲು ಯುವ ಉದ್ಯಮಿಗಳಿಗೆ ಬೆಂಬಲ ನೀಡುವ ಯೋಜನೆಯಾಗಿದೆ.

ಅದರೊಡನೆ, ಬೋಯಿಂಗ್ ತನ್ನ ಬಿಲ್ಡ್ ಕಾರ್ಯಕ್ರಮಕ್ಕಾಗಿ ಭಾರತದ ಏಳು ಇನ್ಕ್ಯುಬೇಟರ್‌ಗಳೊಡನೆ ಕಾರ್ಯಾಚರಿಸುತ್ತಿದೆ. ಇವುಗಳಲ್ಲಿ ಐಐಟಿ ಮುಂಬೈ, ಐಐಟಿ ಡೆಲ್ಲಿ, ಐಐಟಿ ಗಾಂಧಿನಗರ್, ಐಐಟಿ ಮದ್ರಾಸ್‌, ಐಐಎಸ್‌ಸಿ ಬೆಂಗಳೂರು, ಟಿ-ಹಬ್ ಹೈದರಾಬಾದ್, ಹಾಗೂ ಕೆಐಐಟಿ ಭುವನೇಶ್ವರಗಳ ಇನ್‌ಕ್ಯುಬೇಟರ್‌ಗಳು ಸೇರಿವೆ.

ಇಲ್ಲಿ ಇನ್‌ಕ್ಯುಬೇಟರ್‌ಗಳು ಎಂದರೆ, ಹೊಸದಾದ ಮತ್ತು ಸ್ಟಾರ್ಟಪ್ ಕಂಪನಿಗಳು ಅಭಿವೃದ್ಧಿ ಹೊಂದಲು ನೆರವಾಗುವ ಸಂಸ್ಥೆಗಳು ಅಥವಾ ಕಾರ್ಯಕ್ರಮಗಳಾಗಿವೆ. ಈ ಇನ್‌ಕ್ಯುಬೇಟರ್‌ಗಳು ನಿರ್ವಹಣಾ ತರಬೇತಿ, ಕಚೇರಿ ಸ್ಥಳ, ಹಾಗೂ ಕೆಲವೊಂದು ಬಾರಿ ಹಣಕಾಸಿನ ನೆರವನ್ನೂ ಒದಗಿಸುತ್ತವೆ. ಇನ್‌ಕ್ಯುಬೇಟರ್‌ಗಳು ಈ ಹೊಸದಾದ ಉದ್ಯಮಗಳು ತಮ್ಮ ಕಾಲಿನ ಮೇಲೆ ನಿಲ್ಲುವಂತಾಗುವ ತನಕ ಅವುಗಳನ್ನು ಬೆಂಬಲಿಸುವ ಗುರಿ ಹೊಂದಿವೆ.

ಬೋಯಿಂಗ್ ಇಂಡಿಯಾ ಸಂಸ್ಥೆ, ತಾನು ಭಾರತೀಯ ಗ್ರಾಹಕರಿಗೆ ನೂತನ ತಂತ್ರಜ್ಞಾನ ಒದಗಿಸುವ ಗುರಿಯನ್ನು ಹೊಂದಿದ್ದು, ಭಾರತದ ಏರೋಸ್ಪೇಸ್ ಉದ್ಯಮಕ್ಕೆ ಧನಾತ್ಮಕ ಕೊಡುಗೆ ನೀಡಲು ಬದ್ಧವಾಗಿರುವುದಾಗಿ ಹೇಳಿದೆ.

ಬೋಯಿಂಗ್ ಈಗಾಗಲೇ 300ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳ ಸುಭದ್ರವಾದ ಜಾಲವನ್ನು ನಿರ್ಮಿಸಿದ್ದು, ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು 737 ವಿಮಾನಗಳ ಬಿಡಿಭಾಗಗಳನ್ನು ನಿರ್ಮಿಸಲು ಸಹಯೋಗ ಹೊಂದಿದೆ. ಬೋಯಿಂಗ್ ಭಾರತದಿಂದ ಭಾರತದಿಂದ ತನಗೆ ಬೇಕಾದ ಅವಶ್ಯಕತೆಗಳನ್ನು ಪಡೆದುಕೊಳ್ಳಲು ಪ್ರತಿವರ್ಷವೂ ಅಂದಾಜು 1 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತದೆ. ಪ್ರಸ್ತುತ, ಬೋಯಿಂಗ್ ಭಾರತದಲ್ಲಿ 6,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, 13,000 ಹೆಚ್ಚುವರಿ ಜನರು ಬೋಯಿಂಗ್ ಸಂಸ್ಥೆಯ ಪೂರೈಕೆ ಸರಪಳಿ ಸಹಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News