ಉಮ್ರಾನ್ ಮಲಿಕ್‍ಗೆ ನೀವು ಯಾವಾಗ ಅವಕಾಶ ನೀಡುತ್ತೀರಿ?: ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ

ಟಿ-20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡದ ಬಗ್ಗೆ ದಿಲೀಪ್ ವೆಂಗ್‌ಸರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Sep 30, 2022, 04:15 PM IST
  • ಟೀಂ ಇಂಡಿಯಾದಲ್ಲಿ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್‍ಗೆ ಸಿಗದ ಅವಕಾಶ
  • ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‍ಸರ್ಕರ್ ಆಕ್ರೋಶ
  • ಯುವ ಬೌಲರ್‍ಗೆ ಈಗ ಅಲ್ಲದಿದ್ದರೆ ಮುಂದೆ ಯಾವಾಗ ಅವಕಾಶ ನೀಡುತ್ತೀರಿ ಎಂದು ಪ್ರಶ್ನೆ
ಉಮ್ರಾನ್ ಮಲಿಕ್‍ಗೆ ನೀವು ಯಾವಾಗ ಅವಕಾಶ ನೀಡುತ್ತೀರಿ?: ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ title=
ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗನ ಆಕ್ರೋಶ

ನವದೆಹಲಿ: ಟೀಂ ಇಂಡಿಯಾದಲ್ಲಿ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್‍ಗೆ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಅವರನ್ನು ನಿರಂತರ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕರ್ ಪ್ರತಿಕ್ರಿಯಿಸಿದ್ದು, ಆಯ್ಕೆಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಉಮ್ರಾನ್ ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಆದರೆ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಈಗ ಅಲ್ಲದಿದ್ದರೆ ಉಮ್ರಾನ್‍ ಮಲಿಕ್‍ಗೆ ಯಾವಾಗ ನೀವು ಅವಕಾಶ ನೀಡುತ್ತೀರಿ’ ಅಂತಾ ಪ್ರಶ್ನಿಸಿದ್ದಾರೆ.

ಉಮ್ರಾನ್ ಮಲಿಕ್ ಈ ವರ್ಷದ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯಗಳನ್ನು ಆಡಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದ ಈ ವೇಗಿ ಈಗ ನಿರಂತರವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಆಯ್ಕೆಯಾಗಿಲ್ಲ. ಮುಂಬರುವ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿಯೂ ಅವರಿಗೆ ಅವಕಾಶ ನೀಡಿಲ್ಲ.    

ಇದನ್ನೂ ಓದಿ: Jasprit Bumrah : ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಕೊರತೆ ನೀಗಿಸಲು ಈ ಸ್ಪೀಡ್ ಬೌಲರ್​ಗೆ ಚಾನ್ಸ್!

ನಾನು ಇದ್ದಿದ್ದರೆ ಖಂಡಿತಾ ಆಯ್ಕೆ ಮಾಡುತ್ತಿದ್ದೆ

ಟಿ-20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡಿಲ್ಲ. ಈ ಬಗ್ಗೆ ದಿಲೀಪ್ ವೆಂಗ್‌ಸರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ‘ಯಾರೂ ಭವಿಷ್ಯದ ಬಗ್ಗೆ ಯೋಚಿಸುವಂತೆ ತೋರುತ್ತಿಲ್ಲ. ಉಮ್ರಾನ್ ಮಲಿಕ್ ಅವರ ವೇಗದಿಂದಾಗಿ ನಾನು ಅವರನ್ನು ಆಯ್ಕೆ ಮಾಡಿದ್ದೇನೆ. ಈ ಬೌಲರ್ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುತ್ತಾರೆ. ಹೀಗಾಗಿ ನೀವು ಭಾರತ ತಂಡಕ್ಕೆ ಅವರನ್ನು ಆಯ್ಕೆ ಮಾಡಬೇಕು. ಏಕೆಂದರೆ ಅವರ ಬೌಲಿಂಗ್ ವೇಗವು 130 ಕಿಮೀಗೆ ಇಳಿದಾಗ ಆಯ್ಕೆ ಮಾಡುವುದರಿಂದ ಯಾವುದೇ ಪ್ರಯೋಜನವಿರಲ್ಲ’ ಅಂತಾ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ  

66ರ ಹರೆಯದ ಮಾಜಿ ಕ್ರಿಕೆಟಿಗ ವೆಂಗ್‌ಸರ್ಕರ್, ‘ಏಷ್ಯಾಕಪ್-2022ರ ತಂಡದಲ್ಲೂ ಉಮ್ರಾನ್ ಸ್ಥಾನ ಪಡೆಯಬೇಕಿತ್ತು. ದುಬೈನ ಮೈದಾನಗಳಲ್ಲಿ ವೇಗದ ಬೌಲರ್‍ಗಳ ಅವಶ್ಯಕತೆ ಇರುತ್ತದೆ. ಉಮ್ರಾನ್ ಮಲಿಕ್ ಕಳೆದ ವರ್ಷ ಐಪಿಎಲ್ ಟೂರ್ನಿಯಲ್ಲಿ ತನ್ನ ವೇಗದಿಂದ ಸಾಕಷ್ಟು ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲ 2022ರಲ್ಲಿ ಲೀಗ್‍ನಲ್ಲಿ 145-150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ನಂತರ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಯಿತು. ಆದರೆ ಇತ್ತೀಚೆಗೆ ಅವರ ಬಗ್ಗೆ ಯಾರೂ ಯೋಚಿಸುತ್ತಿಲ್ಲ’ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: Virat Kohli ‌: ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್‌ ಮಾಡಬೇಡಿʼ

3 ಪಂದ್ಯಗಳಲ್ಲಿ ಮಾತ್ರ ಅವಕಾಶ  

ಉಮ್ರಾನ್ ಮಲಿಕ್ ಇದುವರೆಗೆ 3 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 12.44 ಎಕಾನಮಿ ದರದಲ್ಲಿ ಒಟ್ಟು 2 ವಿಕೆಟ್ ಪಡೆದಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4.87ರ ಎಕಾನಮಿ ದರದಲ್ಲಿ 5 ಪಂದ್ಯಗಳಲ್ಲಿ 8 ವಿಕೆಟ್‌ ಗಳಿಸಿದ್ದಾರೆ. ಉಮ್ರಾನ್ ಭಾರತ A ತಂಡದ ಭಾಗವಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News