ನಾಯಕನಾಗಿ ಕೆ.ಎಲ್.ರಾಹುಲ್‌ಗೆ ಉತ್ತಮ ಭವಿಷ್ಯವಿದೆ: ಕನ್ನಡಿಗನನ್ನು ಹಾಡಿ ಹೊಗಳಿದ ಗಂಭೀರ್

ಕಳೆದ 2 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡದ ನಾಯಕನಾಗಿದ್ದ ಕೆ.ಎಲ್.ರಾಹುಲ್ ತಂಡವನ್ನು ಫ್ಲೇಆಫ್‌ಗೇರಿಸಲು ವಿಫಲವಾಗಿದ್ದರು

Written by - Puttaraj K Alur | Last Updated : Feb 1, 2022, 09:24 PM IST
  • ಕೇವಲ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ಕೆ.ಎಲ್.ರಾಹುಲ್ ಗೆ ಉತ್ತಮ ಭವಿಷ್ಯವಿದೆ
  • ಕನ್ನಡಿಗ ಕೆ.ಎಲ್.ರಾಹುಲ್ ರನ್ನು ಹಾಡಿ ಹೊಗಳಿದ 2011ರ ವಿಶ್ವಕಪ್ ಹೀರೋ ಗೌತಮ್ ಗಂಭೀರ್
  • ಕೇವಲ 4 ಪಂದ್ಯಗಳಿಂದ ಮಾತ್ರ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನಿಸುವುದು ಸರಿಯಲ್ಲವೆಂದ ಗಂಭೀರ್
ನಾಯಕನಾಗಿ ಕೆ.ಎಲ್.ರಾಹುಲ್‌ಗೆ ಉತ್ತಮ ಭವಿಷ್ಯವಿದೆ: ಕನ್ನಡಿಗನನ್ನು ಹಾಡಿ ಹೊಗಳಿದ ಗಂಭೀರ್ title=
ಕೆ.ಎಲ್.ರಾಹುಲ್ ಹಾಡಿ ಹೊಗಳಿದ ಗೌತಮ್ ಗಂಭೀರ್

ನವದೆಹಲಿ: ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಮಾಜಿ ಓಪನರ್ ಗೌತಮ್ ಗಂಭೀರ್(Gautam Gambhir) ಅವರು ಕನ್ನಡಿಗ ಕೆ.ಎಲ್.ರಾಹುಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಹುಲ್ ನಾಯಕತ್ವದಲ್ವಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಎದುರು 1 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗವನ್ನು ಅನುಭವಿಸಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸರಣಿ ಸೋಲಿನ ಬಳಿಕ ಕೆ.ಎಲ್.ರಾಹುಲ್(KL Rahul) ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಪ್ರಿತಿಕ್ರಿಯಿಸಿರುವ ಗಂಭೀರ್, ‘ರಾಹುಲ್ ನಾಯಕತ್ವದ ಬಗ್ಗೆ ಈಗಲೇ ತೀರ್ಮಾನಕ್ಕೆ ಬರುವುದು ಸರಿಯಲ್ಲವೆಂದು’ ಹೇಳಿದ್ದಾರೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆ.ಎಲ್.ರಾಹುಲ್ ನಾಯಕರಾಗಿರುವ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್(Gautam Gambhir) ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: Harbhajan Singh : ಧೋನಿ ಬಗ್ಗೆ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಹರ್ಭಜನ್ ಸಿಂಗ್!

ಕಳೆದ 2 ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡದ ನಾಯಕನಾಗಿದ್ದ ರಾಹುಲ್ ತಂಡವನ್ನು ಫ್ಲೇಆಫ್‌ಗೇರಿಸಲು ವಿಫಲವಾಗಿದ್ದರು. ಆದರೆ ವೈಯಕ್ತಿಕವಾಗಿ ರಾಹುಲ್ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಹಲವು ಪಂದ್ಯಗಳಲ್ಲಿ ತಂಡದ ಗೆಲುವಿಗೆ ಏಕಾಂಗಿ ಹೋರಾಟವನ್ನೂ ಮಾಡಿದ್ದರು. ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ ರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ(Rohit Sharma) ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದ ಕಾರಣ ರಾಹುಲ್ ಹೆಗಲಿಗೆ ನಾಯಕತ್ವದ ಹೊಣೆಗಾರಿಕೆ ಏರಿತು. ಆದರೆ ಈ ಸರಣಿಯಲ್ಲಿ ಟೀಂ ಇಂಡಿಯಾ ಭಾರೀ ಹಿನ್ನೆಡೆ ಅನುಭಿವಿಸಿದ್ದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.   

ಈ ಎಲ್ಲಾ ಟೀಕೆಗಳ ಮಧ್ಯೆ ರಾಹುಲ್ ನಾಯಕತ್ವದ ಬಗ್ಗೆ ಗಂಭೀರ್ ಭರವಸೆ ವ್ಯಕ್ತಪಡಿಸಿದ್ದಾರೆ. ‘ಕೆಲವೊಮ್ಮೆ ನಾವು ಕೆಲವರನ್ನು ಪ್ರದರ್ಶನ ಹಾಗೂ ಫಲಿತಾಂಶದ ದೃಷ್ಟಿಕೋನದಿಂದ ಮಾತ್ರವೇ ನೋಡುತ್ತೇವೆ. ಆದರೆ ಕೇವಲ 4 ಪಂದ್ಯಗಳ ಫಲಿತಾಂಶ ನೋಡಿ ಒಬ್ಬ ನಾಯಕನ ಅರ್ಹತೆಯನ್ನು ಹೇಳುವುದು ಸರಿಯಲ್ಲವೆಂದು’ ಅವರು ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿ(T20 Match)ಗೆ ಭಾರತ ತಂಡದ ಉಪನಾಯಕನಾಗಿ ಕೆ.ಎಲ್.ರಾಹುಲ್ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: Best Captain: ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ನಾಯಕ..?

‘ಯಾರೇ ಆಗಲಿ ನಾಯಕನಾದವನಲ್ಲಿ ಇರಬೇಕಾದ ಅತಿದೊಡ್ಡ ಗುಣವೆಂದರೆ ಎಲ್ಲವನ್ನೂ ಸಮ-ಬಲದಿಂದ ನೋಡುವುದು. ಗೆದ್ದಾಗ ಹೆಚ್ಚು ಸಂಭ್ರಮಿಸದೆ, ಸೋತಾಗ ಕುಸಿದು ಹೋಗದೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ರಾಹುಲ್(KL Rahul) ಬಳಿ ಈ ಅತ್ಯುತ್ತಮ ಗುಣವಿದೆ. ಆತ ನಾಯಕತ್ವದ ಹಾದಿಯಲ್ಲಿ ಉತ್ತಮ ಹಾದಿಯಲ್ಲಿದ್ದಾನೆ. ಪ್ರತಿದಿನವೂ ಬೆಳವಣಿಗೆ ಸಾಧಿಸುತ್ತಾ ನಾವು ನಮ್ಮ ಕೈಲಾದಷ್ಟು ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸಬೇಕು. ನಾನು ಕಂಡಿರುವಂತೆ ರಾಹುಲ್ ಅವರು ಶ್ರೇಷ್ಠ ಭವಿಷ್ಯವನ್ನು ಹೊಂದಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲ, ನಾಯಕನಾಗಿಯೂ ರಾಹುಲ್ ಗೆ ಅತ್ಯುತ್ತಮ ಭವಿಷ್ಯವಿದೆ ಅಂತಾ ಗಂಭೀರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News