ಬೆಂಗಳೂರು: ಆಗಸ್ಟ್ 16ರಿಂದ ಆರಂಭವಾಗಲಿರುವ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಟ್ರೋಫಿಯನ್ನು ಮಂಗಳವಾರ ಕಿಚ್ಚ ಸುದೀಪ್ ವಿಶೇಷ ರೀತಿಯಲ್ಲಿ ಬಿಡುಗಡೆ ಮಾಡಿದರು.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾತ ಜಾದೂಗಾರ ಆಕಾಶ್ ಅವರ ಜಾದೂ ಮೂಲಕ ಲಾಂಚ್ ಮಾಡಲಾಯಿತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್, ಭಾರತ ಮಹಿಳಾ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಸುದೀಪ್, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವುದೇ ಒಂದು ಹೆಮ್ಮೆಯ ವಿಚಾರ. ಎಲ್ಲರೂ ವಿದಾಯ ಹೇಳುವ ಸಮಯದಲ್ಲಿ ನಾನು ಕ್ರಿಕೆಟ್ ಆರಂಭಿಸಿದ್ದೇನೆ. ಮತ್ತೆ ಆಡ್ತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ಕೆಎಸ್ಸಿಎ ಸಹಕಾರದಿಂದ ಮತ್ತೆ ಆಡುವಂತಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೆಪಿಎಲ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್, ಕೆಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಯುವ ಕ್ರಿಕೆಟಿಗರಿಗೆ ಅಷ್ಟೇ ವೇಗದಲ್ಲಿ ಐಪಿಎಲ್ ಮತ್ತು ಟೀಂ ಇಂಡಿಯಾ ಪ್ರತಿನಿಧಿಸುವ ಅವಕಾಶಗಳಿವೆ. ಅಲ್ಲದೆ, ಈ ಬಾರಿ ಸರ್ಕಾರಿ ಶಾಲೆ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಕ್ರಿಕೆಟ್ ತರಬೇತಿ ನಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆಗಸ್ಟ್ 16 ರಿಂದ 31ರವರೆಗೆ 2 ಚರಣಗಳಲ್ಲಿ ಕೆಪಿಎಲ್ ಟೂರ್ನಿ ನಡೆಯಲಿದ್ದು, ಕೆಪಿಎಲ್ ಟೂರ್ನಿಯ ಮೊದಲ ಚರಣದ ಪಂದ್ಯಗಳು ಆಗಸ್ಟ್ 16 ರಿಂದ 23ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿವೆ. ಇನ್ನುಳಿದ ಪಂದ್ಯಗಳನ್ನು ಆಗಸ್ಟ್ 25 ರಿಂದ 31ರ ವರೆಗೆ ಮೈಸೂರಿನಲ್ಲಿ ಆಯೋಜಿಸಲಾಗಿದೆ.