ಕೊಪ್ಪಳ: ಹೊಸ ಇತಿಹಾಸ ಬರೆದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ

ಶ್ರೀ ಆಂಜನೇಯ ಸ್ವಾಮಿ ಜನ್ಮತಾಣವಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯು ವರ್ಷಾಂತ್ಯದ ಡಿಸೆಂಬರ್ ಮಾಹೆಯಲ್ಲಿ ಮತ್ತೊಂದು ಇತಿಹಾಸ ದಾಖಲಿಸಿತು.

ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಆಯೋಜನೆ ಮಾಡಿದ್ದ ಈ ಬಾರಿಯ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿನ ಹೊಸತನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.ಹನುಮಮಾಲಾ ವಿಸರ್ಜನೆಯ ಮುನ್ನಾ ದಿನವಾದ ಡಿಸೆಂಬರ್ 23ರಂದು ಕಂಡು ಬಂದ ಹಬ್ಬದ ಸಂಭ್ರಮವು ಡಿಸೆಂಬರ್ 24ರಂದು ಸಹ ವಿಶೇಷವಾಗಿ ಕಂಡು ಬಂದು ಅದಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು. ಡಿಸೆಂಬರ್ 24ರಂದು ಸಹ ಕಣ್ಣು ಹಾಯಿಸಿದೆಲ್ಲೆಡೆ ಕಾಣುತ್ತಿದ್ದ, ಇರುವೆ ಹರಿದಾಡುವಂತೆ ಅಲ್ಲಲ್ಲಿ ಸುತ್ತುತ್ತ ಶಾಂತಿ ಮತ್ತು ಶಿಸ್ತಿನಿಂದ ಹೆಜ್ಜೆ ಹಾಕಿದ ಹನುಮವ ಮಾಲಾಧಾರಿಗಳು ಅಕ್ಷರಶಃ ಹನುಮನ ಪ್ರತಿರೂಪದಂತೆ ಕಂಡು ಬಂದರು.

 

 

 

 

 

 

 

1 /8

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಂಜನಾದ್ರಿಗೆ ಆಗಮಿಸಿ ಕಾರ್ಯಕ್ರಮದ ವ್ಯವಸ್ಥೆಯನ್ನು ಪರಿಶೀಲಿಸಿದರು. ಅತ್ಯಂತ ಅಚ್ಚುಕಟ್ಟಾಗಿ ನಡೆದ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರಾದ ಜನಾರ್ಧನ ರೆಡ್ಡಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಅಂಜನಾದ್ರಿಗೆ ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ತಹಸೀಲ್ದಾರರಾದ ವಿಶ್ವನಾಥ ಮುರುಡಿ, ಶೃತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗಂಗಾವತಿಯ ಪೌರಾಯುಕ್ತರು ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಅಂಜನಾದ್ರಿಯಲ್ಲಿದ್ದು ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

2 /8

ನಾನಾ ಸೌಕರ್ಯ: ಅಂಜನಾದ್ರಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆಂದು ಪೂರ್ವ ನಿಯೋಜನೆಯೊಂದಿಗೆ ಜಿಲ್ಲಾಡಳಿತವು ಎಲ್ಲಾ ರೀತಿಯ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿತ್ತು. ಕುಡಿಯುವ ನೀರು, ಸ್ನಾನಗೃಹಗಳು, ವಾಹನಗಳಿಗೆ ಪಾರ್ಕಿಂಗ್, ಪ್ರಸಾದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಸಹಾಯವಾಣಿ, ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ, ವಿವಿಧೆಡೆ ಕಂಟ್ರೋಲ್ ರೂಮ್ ಸೇರಿದಂತೆ ಸುತ್ತ ಎಲ್ಲ ಕಡೆಯೂ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದರಿಂದ ಹನುಮ ಮಾಲಾಧಾರಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಯಿತು. ಈ ಮೂಲಕ ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ಎರಡೂ ದಿನಗಳ ಕಾಲ ಆಯೋಜನೆಯಾಗಿದ್ದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವು ಜನ ಮೆಚ್ಚುಗೆಯೊಂದಿಗೆ ಯಶಸ್ಸು ಕಂಡಿತು.  

3 /8

ಬಹುತೇಕ ಭಕ್ತರು ಹೊತ್ತೇರುವ ಮೊದಲೇ ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ಅಂಜನಾದ್ರಿಯಿಂದ ನಿರ್ಗಮಿಸಿ ಅಂಜನಾದ್ರಿ ಸುತ್ತಲಿನ ವಿವಿಧ ದೇವಸ್ಥಾನಗಳ ದರ್ಶನಕ್ಕಾಗಿ ಲಗುಬಗೆಯಿಂದ ತೆರಳುತ್ತಿದ್ದ ದೃಶ್ಯಗಳು ಸಹ ಸಾಮಾನ್ಯವಾಗಿತ್ತು. ಅಂಜನಾದ್ರಿಯಲ್ಲಿ ಹನುಮ ದೇವರ ದರ್ಶನ ಪಡೆದ ಬಳಿಕ ಕೆಲವರು ಹತ್ತಿರದ ಹಂಪಿಯ ವಿರುಪಾಕ್ಷೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳಿದರೆ ಇನ್ನು ಕೆಲವು ಭಕ್ತರು ಹತ್ತಿರದ ಹುಲಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನ ಮತ್ತು ಕೊಪ್ಪಳ ಗವಿಸಿದ್ದೇಶ್ವರ ಮಠದತ್ತ ತೆರಳುತ್ತಿರುವುದು ಸಹ ಕಂಡು ಬಂದಿತು. ಇನ್ನು ಕೆಲವು ಭಕ್ತರು ಬೇರೆ ಬೇರೆ ದೇವಸ್ಥಾನಗಳತ್ತ ತೆರಳಿದರು. ಇನ್ನು ಕೆಲವು ಭಕ್ತರು ಹಂಪಿ, ತುಂಗಭದ್ರಾ ನದಿ ಸೇರಿದಂತೆ ಚೆಂದದ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದರು.  

4 /8

ಬೆಟ್ಟದಿಂದ ಕೆಳಗೆ ಇಳಿದ ಬಳಿಕ ಭಕ್ತರು ನೇರವಾಗಿ ಬೆಟ್ಟಕ್ಕೆ ಹೊಂದಿಕೊಂಡ ವೇಧಪಾಠ ಶಾಲೆಯತ್ತ ಸಾಗಿ ಅಲ್ಲಿ ವ್ಯವಸ್ಥೆ ಮಾಡಿದ್ದ ಪ್ರಸಾದವನ್ನು ಪಡೆದು ಬೆಟ್ಟದ ಅಲ್ಲಲ್ಲಿ ಕೆಲಹೊತ್ತು ಕುಳಿತು ವಿರಮಿಸಿ ಅಲ್ಲಿಂದ ತಿರುಗಿ ಮತ್ತೆ ತಮ್ಮ ತಮ್ಮ ಸ್ಥಳಕ್ಕೆ ಸಾಗುತ್ತಿದ್ದ ವೇಳೆಯಲ್ಲಿ ತಮ್ಮ ನೆಚ್ಚಿನ ಹನುಮದೇವರ ಮೂರ್ತಿಗಳನ್ನು ಖರೀದಿಸುವುದು, ಭಕ್ತಿ ಭಾವದ ಪ್ರತೀಕದ ನಾನಾ ಬಗೆಯ ಹಾರ-ದಾರಗಳೊಂದಿಗೆ ಸಾಗುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು.  

5 /8

ತಮ್ಮ ನೆಚ್ಚಿನ ದೇವರು ಆಂಜನೇಯ ಸ್ವಾಮಿ ದರ್ಶನ ಪಡೆದ ಬಳಿಕ ಹನುಮ ಮಾಲಾಧಾರಿಗಳು ಪುನೀತರಾಗಿ ಅವರ ಮೊಗದಲ್ಲಿ ಸಂತಸ ಕಾಣುತಿತ್ತು. ಬೆಟ್ಟದ ಮೇಲೆ ಕೆಲ ನಿಮಿಷಗಳ ಕಾಲ ವಿರಮಿಸಿ ಮತ್ತೆ ಪ್ರಸನ್ನಮಯ ಮುಖ ಹೊತ್ತು ಬೆಟ್ಟದಿಂದ ಸಾಲುಸಾಲಾಗಿ ಕೆಳಗೆ ಬರುತ್ತಿದ್ದಾಗ ದೂರದ ಚೆಂದದ ಗುಡ್ಡಗಳ ದೃಶ್ಯಾವಳಿಗಳನ್ನು, ಅಲ್ಲಲ್ಲಿ ಹಚ್ಚಹಸಿರಾಗಿ ಕಾಣುತ್ತಿದ್ದ ಭತ್ತದ ಗದ್ದೆಗಳನ್ನು ಮೊಬೈನಲ್ಲಿ ಸೆರೆ ಹಿಡಿಯುವ ದೃಶ್ಯಗಳು ಕಾಣಿಸಿದವು.  

6 /8

ಶನಿವಾರ ಆಂಜನೇಯ ಸ್ವಾಮಿಯ ದಿನವಾಗಿದ್ದರಿಂದ ವಾಡಿಕೆಯಂತೆ ಡಿಸೆಂಬರ್ 23ರ ಸಂಜೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಸಾರ್ವಜನಿಕರು ಅಂಜನಾದ್ರಿಯತ್ತ ಆಗಮಿಸಿ ಆಂಜನೇಯನ ಸನ್ನಿಧಿಯಲ್ಲಿ ಅಲ್ಲಲ್ಲಿ ವಾಸ್ತವ್ಯ ಹೂಡಿದರು. ಭಾನುವಾರ ಬೆಳ್ಳಂಬೆಳಗ್ಗೆಯೇ ಸ್ನಾನ ಮಾಡಿ ಸೂರ್ಯೋದಯ ಮುನ್ನವೇ ಬೆಟ್ಟದತ್ತ ಸಾಲುಸಾಲಾಗಿ ಸಾಗಿ ಭಕ್ತಿ ಭಾವದಿಂದ ಜೈ ಹನುಮಾನ ಜೈ ಶ್ರೀರಾಮ ಎಂದು ಘೋಷಣೆ ಮೊಳಗಿಸುತ್ತ ಪಾದಗಟ್ಟೆ ಪಕ್ಕದ ಪಾಟುನಗಿಗಳ ಮೂಲಕ ಸಾಗುತ್ತಿದ್ದಾಗ ಆಂಜನೇಯ ಸ್ವಾಮಿ ದರ್ಶನ ಪಡೆಯಲು ನಾ ಮುಂದೆ ನೀ ಮುಂದೆ ಎನ್ನುವಂತೆ ಕೆಲವರು ಓಡುತ್ತ ಅತೀ ಎತ್ತರದ ಬೆಟ್ಟದ ಮೇಲೆ ಬರಬರನೇ ಏರಿದರು.  

7 /8

ಜಿಲ್ಲಾಡಳಿತವು ಈ ಬಾರಿ ವಿವಿಧೆಡೆ ಶ್ರೀ ಆಂಜನೇಯ ಸ್ವಾಮಿ ದರ್ಶನದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದರಿಂದ ಅಂಜನಾದ್ರಿಗೆ ಬಂದಿದ್ದ ಭಕ್ತರು ಬೆಟ್ಟದ ಕೆಳಗಡೆಯೇ ಆಂಜನೇಯ ಸ್ವಾಮಿಯ ದರ್ಶನ ಪಡೆದು ನಮಿಸಿದರು. ತಮ್ಮ ಹರಕೆಯ ಹೊರೆಯನ್ನು ಇಳಿಸಿದರು. ಆಂಜನೇಯ ದರ್ಶನದೊಂದಿಗೆ ಹೊಸ ಸಂಕಲ್ಪ ಮಾಡಿ ಹುಮ್ಮಸ್ಸಿನಿಂದ ತೆರಳಿದರು.

8 /8

2023 ವರ್ಷದ ಮುಕ್ತಾಯಕ್ಕೆ ಬೆರಳೆಣಿಕೆಯ ಕೆಲವೇ ದಿನಗಳು ಬಾಕಿ ಇದ್ದು, ವರ್ಷದ ಕೊನೆಯ ತಿಂಗಳ ಡಿಸೆಂಬರ್‌ನಲ್ಲಿ ಆಯೋಜನೆಯಾಗಿದ್ದ 2023ರ ಹನುಮಮಾಲಾ ವಿಸರ್ಜನೆಯ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತವು ಈ ಬಾರಿ ಕೈಗೊಂಡ ಧ್ವನಿ ಬೆಳಕು, ಅಂಜನೇಯ ಸ್ವಾಮಿಯ ದರ್ಶನದ ನೇರ ಪ್ರಸಾರ ಸೇರಿದಂತೆ ಕೆಲವು ಹೊಸ ಹೊಸ ಪ್ರಯೋಗಗಳಿಗೆ ರಾಜ್ಯದ ಹಾಗೂ ದೇಶದ ನಾನಾ ಭಾಗದ ಲಕ್ಷಾಂತರ ಭಕ್ತರು ಪ್ರತ್ಯಕ್ಷ ಸಾಕ್ಷಿಯಾದರು.