ಕರ್ನಾಟಕ ವಿಧಾನಸಭೆಯ 224 ಸ್ಥಾನಗಳಲ್ಲಿ 222 ಸ್ಥಾನಗಳಿಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬೆಲಿಗ್ಗೆಯಿಂದಲೀ ರಾಜ್ಯದ ಜನತೆ ಎಲ್ಲಾ ಮತಗಟ್ಟೆಗಳಲ್ಲಿ ಕ್ಯೂನಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣಾ ಅಧಿಕಾರಿಗಳು ತಾಂತ್ರಿಕ ದೋಷ ಕಂಡುಬಂದ ಮತಯಂತ್ರಗಳ ತಪಾಸಣೆಗೆ ಮುಂದಾಗಿದ್ದಾರೆ. (ಪೋಟೋ ಕೃಪೆ: ANI)
ಮತದಾರರು ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಮತಚಲಾವಣೆಯಲ್ಲಿ ನಿರತರಾಗಿದ್ದರೆ, ಇತ್ತ ರಾಜಕೀಯ ನಾಯಕರು ತಮ್ಮ ಉತ್ತಮ ಭವಿಷ್ಯಕಾಗಿ ಪೂಜೆ, ಪುನಸ್ಕಾರದಲ್ಲಿ ತೊಡಗಿದ್ದಾರೆ.
ಮತ್ತೊಂಡೆ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರು ಮತದಾನಕ್ಕೂ ಮುನ್ನ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ತಮ್ಮ ಕ್ಷೇತ್ರವಾದ ಶಿಕಾರಿಪುರದಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಸಿದ್ದರಾಮಯ್ಯ ಸರ್ಕಾರದಿಂದ ಬೇಸತ್ತಿದ್ದಾರೆ. ಹಾಗಾಗಿ ಜನ ಈ ಬಾರಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಅದಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಉತ್ತಮ ಸರ್ಕಾರ ನೀಡುವ ವಿಶ್ವಾಸವಿದೆ" ಎಂದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಮತ್ತು ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿರುವ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಇಂದು ಬೆಳಿಗ್ಗೆ ಮತದಾನಕ್ಕೂ ಮುನ್ನ ಮನೆಯಲ್ಲಿ ಗೋ ಪೂಜೆ ಮಾಡಿದರು. ಅಲ್ಲದೆ, ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಈ ಕ್ಷೇತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದೆ.
ಇನ್ನು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಜಯನಗರದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿಯವರನ್ನು ಭೇಟಿಯಾದರು. ಮತದಾನದ ಮೊದಲು ತಮ್ಮ ಪತ್ನಿಯೊಂದಿಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಹೆಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. (ಫೋಟೋ ಕ್ರೆಡಿಟ್: ANI)