ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉತ್ತರಾಖಂಡ್'ನ ಡೆಹ್ರಾಡೂನ್‌ನ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಬೃಹತ್ ವಿಸ್ತೀರ್ಣದ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡು, ಯೋಗಾಭ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ನೂರಾರು ದೈಹಿಕ ಸಮಸ್ಯೆಗಳಿಗೆ ಯೋಗ ಮದ್ದಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನರ ಜೀವನಶೈಲಿಯಲ್ಲಿ ವ್ಯಕ್ತಿಯ ದೇಹ, ಮೆದುಳು ಮತ್ತು ಆತ್ಮವನ್ನು ಒಗ್ಗೂಡಿಸುವ ಕಾರ್ಯವನ್ನು ಯೋಗ ಮಾಡುತ್ತಿದೆ ಎಂದರು.
ವಿಶ್ವದಲ್ಲಿಯೇ ಭಾರತ ದೇಶ ಯೋಗಕ್ಕೆ ಪ್ರಸಿದ್ಧಿಯಾಗಿದೆ. ಪ್ರಾಚೀನ ಕಾಲದಿಂದ ಇಂದಿನವರೆಗೂ ಯೋಗ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಇದು ನಮ್ಮ ಭವಿಷ್ಯದ ಭರವಸೆಯ ಕಿರಣ ಮೂಡಿಸುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸರ್ಕಾರ ಸುಮಾರು 50 ಸಾವಿರ ಯೋಗ ಮ್ಯಾಟ್ ಗಳನ್ನು ಪೂರೈಕೆ ಮಾಡಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಜನರ ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂತಾರಾಷ್ಟ್ರೀಯ ಯೋಗ ದಿನವನ್ನು ಮೊದಲ ಬಾರಿಗೆ ಜೂನ್ 21, 2015ರಲ್ಲಿ ನವದೆಹಲಿಯ ರಾಜ್ ಪಥ್'ನಲ್ಲಿ ಆಚರಿಸಲಾಯಿತು. 30,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಯೋಗ ಪ್ರದರ್ಶನ ಮಾಡಿದ್ದರು.