ಚೆನ್ನೈ: ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ತಮಿಳುನಾಡು, ಪುದುಚೆರಿ ಹಾಗೂ ಕೇರಳ ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಅಕ್ಟೋಬರ್ 7ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಮೀನುಗಾರಿಕೆ ಹಾಗೂ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮುನ್ಸೂಚನೆ ನೀಡಲಾಗಿದೆ. ಎಲ್ಲಾ ಐಎಎಸ್ ಅಧಿಕಾರಿಗಳು ಹೈ ಅಲರ್ಟ್ನಲ್ಲಿ ಇರುವಂತೆ ಹಾಗೂ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸರ್ಕಾರ ಸೂಚಿಸಿದೆ. ತಗ್ಗು ಪ್ರದೇಶದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗಿದೆ.