ನವದೆಹಲಿ: ಭಾನುವಾರದಂದು ಕೇರಳದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳದ ಇಡುಕ್ಕಿ, ತ್ರಿಶ್ಶುರ್ ಮತ್ತು ಪಾಲಕ್ಕಡ್ ಜಿಲ್ಲೆಗಳು ಈ ಮಳೆಗೆ ಆಹುತಿಯಾಗಲಿವೆ ಎಂದು ತಿಳಿದು ಬಂದಿದೆ.
ಹವಾಮಾನ ಇಲಾಖೆ ವರದಿಯಂತೆ ಶ್ರೀಲಂಕಾದ ತೀರಕ್ಕೆ ಹತ್ತಿರವಿರುವ ಅರೇಬಿಯನ್ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶದ ಬಗ್ಗೆ ತಿಳಿದು ಬಂದ ನಂತರ ಹವಾಮಾನ ಇಲಾಖೆ ಈ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
Today's weather forecast & warnings based on 0300 UTC of 03.10.2018 pic.twitter.com/CWLr8ifjT7
— India Met. Dept. (@Indiametdept) October 3, 2018
ಇದು ಚಂಡಮಾರುತವನ್ನು ಸೃಷ್ಟಿಸುವ ಸಾಧ್ಯತೆಯಿದೆ ಆದ್ದರಿಂದಾಗಿ ಎಚ್ಚರಿಕೆ ನೀಡಲಾಗಿದೆ. ಲಕ್ಷದ್ವೀಪದ ಕರಾವಳಿಯಲ್ಲಿನ ಹವಾಮಾನದ ಅನುಗುಣವಾಗಿ ಈ ಲೆಕ್ಕಾಚಾರಕ್ಕೆ ಹವಾಮಾನ ಇಲಾಖೆ ಬಂದಿದೆ.ಈ ಹಿನ್ನಲೆಯಲ್ಲಿ ಮೀನುಗಾರರಿಗೆ ಶುಕ್ರವಾರದ ಒಳಗಡೆ ಸುರಕ್ಷಿತ ಕರಾವಳಿಗೆ ತಲುಪಲು ಸೂಚಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿನಾರೈ ವಿಜಯನ್ ತಿಳಿಸಿದ್ದಾರೆ.
ವಿಪತ್ತು ನಿರ್ವಹಣಾ ಪ್ರಾಧಿಕಾರವು ಪರಿಸ್ಥಿತಿಯನ್ನು ವೀಕ್ಷಿಸಲು ಭೇಟಿ ನೀಡಿದೆ. ಈಗಾಗಲೇ ನಾವು ಕೇಂದ್ರೀಯ ಏಜೆನ್ಸಿಗಳಿಂದ ಬೆಂಬಲವನ್ನು ಕೋರಿದ್ದೇವೆ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಐದು ಕಂಪೆನಿಗಳನ್ನು ಕೇಳಿದೆ, ಅಲ್ಲದೆ ಬಿಕ್ಕಟ್ಟನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲೆಯ ಆಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕೇರಳ ಆಗಸ್ಟ್ ತಿಂಗಳದಲ್ಲಿ ಶತಮಾನದಲ್ಲಿಯೇ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಸರ್ಕಾರದ ಅಂಕಿ ಅಂಶಗಳ ಪ್ರಕಾರ, 443 ಜನರು ಮೃತಪಟ್ಟಿದ್ದು, ರಾಜ್ಯದ 14 ಜಿಲ್ಲೆಗಳಲ್ಲಿ 54.11 ಲಕ್ಷ ಜನರು ಪ್ರವಾಹ ಪೀಡಿತರಾಗಿದ್ದರು.