ಜಕಾರ್ತಾ: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಶುಕ್ರವಾರ ನಡೆದ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸುಮಾರು 350,000 ಜನಸಂಖ್ಯೆ ಹೊಂದಿರುವ ಸುಲುವೆಸಿ ದ್ವೀಪಕ್ಕೆ ಸುಮಾರು 6 ಮೀಟರ್ (20 ಅಡಿ) ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದ ಎರಡು ದಿನಗಳ ನಂತರವೂ ಹಲವು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವುದು ಪತ್ತೆಯಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗಿನ ಎಲ್ಲಾ ಸಾವುಗಳು ಪಲು ನಗರದಲ್ಲಿ ವರದಿಯಾಗಿವೆ.
At least 832 dead in Indonesia quake-tsunami disaster: official (AFP) pic.twitter.com/EEw5Ih75iS
— ANI (@ANI) September 30, 2018
ಇಂಡೋನೇಷ್ಯಾ ಭೂಗರ್ಭದ ಅಡಿಯಲ್ಲಿ ಹಲವಾರು ಜ್ವಾಲಾಮುಖಿಗಳು ಮತ್ತು ಬಿರುಕುಗಳು ಇರುವುದರಿಂದ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತವೆ. 2004ರಲ್ಲಿ ಸುಮಾತ್ರಾ ದ್ವೀಪದ ಬಳಿ ಸಂಭವಿಸಿದ ಶತಮಾನದ ಭೀಕರ ಭೂಕಂಪದಲ್ಲಿ (9.1 ತೀವ್ರತೆ) ಹಲವಾರು ದೇಶಗಳಲ್ಲಿ 2,30,000ಕ್ಕೂ ಹೆಚ್ಚು ಜನ ಬಲಿಯಾಗಿದ್ದರು.