ಹಾಸನ: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಕ್ರಮವಾಗಿ ತಮ್ಮ ಮಗನ ಹೆಸರಿಗೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುದ್ದ ಹೋಬಳಿಯ ಸೋಮನಹಳ್ಳಿ ಕಾವಲಿನಲ್ಲಿ ದಾಖಲೆಗಳನ್ನು ತಿದ್ದಿ ಕಾನೂನು ಬಾಹಿರವಾಗಿ 54 ಎಕರೆ ಭೂಮಿಯನ್ನು ತಮ್ಮ ಪುತ್ರನ ಹೆಸರಿಗೆ ಮಾಡಿಸಿದ್ದಾರೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ಕೂಡಲೇ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಸರ್ಕಾರದ ಭೂಮಿಯನ್ನು ಸಣ್ಣೇಗೌಡ ಎಂಬಾತನ ಹೆಸರಿಗೆ ಮಂಜೂರು ಆಗದೇ ಇದ್ದರೂ ಆತ ಗಿರಿಯಪ್ಪ ಎಂಬುವನಿಗೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಗಿರಿಯಪ್ಪನಿಂದ ಪ್ರಜ್ವಲ್ ರೇವಣ್ಣ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ. ಇದರಲ್ಲಿ ಅಧಿಕಾರಿಗಳ ಲೋಪ ಸಾಕಷ್ಟು ಇದೆ. ಈ ಅವ್ಯವಹಾರದ ಕುರಿತು ನ್ಯಾಯ ದೊರೆಯುವವರೆಗೂ ಹೋರಾಡುತ್ತೇನೆ ಎಂದು ಅವರು ಹೇಳಿದರು.
ಈಗ ಹಾಸನ ತಾಲ್ಲೂಕಿನ ಕಸಬಾ ಹೋಬಳಿಯ ರಾಂಪುರ, ದೊಡ್ಡಕುಂಡಗೋಳ, ನಿಡುಡಿ ಗ್ರಾಮಗಳಲ್ಲಿ ಸುಮ್ಮನೆ ಸರ್ವೆ ಮಾಡಿಸುತ್ತಿದ್ದಾರೆ. ಇದಕ್ಕೆ ಯಾವುದೇ ಆಧಾರ ಅಥವಾ ಆದೇಶ ಇಲ್ಲ. ಹೀಗೆ ಪ್ರಭಾವಿ ರಾಜಕಾರಣಿಗಳೇ ತಮ್ಮ ಅನುಕೂಲಕ್ಕೆ ತಕ್ಕಂತೆ ಭೂಮಿ ಮಂಜೂರು ಮಾಡಿಕೊಳ್ಳುವುದಾದರೆ ಸಾಮಾನ್ಯ ಜನರ ಸ್ಥಿತಿ ಏನು ಎಂದು ಪ್ರಶ್ನಿಸಿದ ಎ.ಮಂಜು, ಸಮ್ಮಿಶ್ರ ಸರ್ಕಾರ ಇರೋದು ಸರ್ಕಾರ ನಡೆಸಲೇ ಹೊರತು, ಈ ರೀತಿ ಲೂಟಿ ಮಾಡಲು ಅಲ್ಲ ಎಂದು ಕಿಡಿಕಾರಿದರು.