ಚಂಡೀಗಢ: ಹರಿಯಾಣ ಪೊಲೀಸ್ ಇಲಾಖೆಯ ಮಹಿಳಾ ಹೆಡ್ ಕಾನ್ಸ್ಟೇಬಲ್ ಮೇಲೆ ಅದೇ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಓರ್ವ ಆತನ ಸಹೋದರನೊಂದಿಗೆ ಅತ್ಯಾಚಾರ ಎಸಗಿದ್ದು, ನಂತರ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆಕೆ ದೂರು ನೀಡಿರುವುದಾಗಿ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಪಲ್ವಾಲದ ಮಹಿಳಾ ಪೋಲಿಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪಲ್ವಾಲ್ ಎಸ್ಪಿ ವಸೀಮ್ ಅಕ್ರಂ ತಿಳಿಸಿದ್ದಾರೆ.
ಆದರೆ, ಮಹಿಳಾ ಕಾನ್ಸ್ಟೇಬಲ್ ಮೇಲಿನ ಅತ್ಯಾಚಾರ ಠಾಣೆಯ ಒಳಗೆ ನಡೆದಿಲ್ಲ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ.
"2014ರಲ್ಲಿ ನಾನು ಪಲವಾಲ್ ನ ಅಲವಾಲಪುರದಲ್ಲಿ ಜೋಗೀಂದರ್ ಅಲಿಯಾಸ್ ಮಿಂಟು ಎಂಬ ವ್ಯಕ್ತಿಯ ಸಂಪರ್ಕಕ್ಕೆ ಬಂದೆ; ಆತನನ್ನು ನಾನು ಮೊದಲ ಬಾರಿಗೆ ಮಹೇಂದ್ರಗಢದಲ್ಲಿ ಭೇಟಿಯಾಗಿದ್ದೆ. ನಾನು ಫರೀದಾಬಾದ್, ಜಿಂದ್ ಮತ್ತು ಪಲವಾಲ್ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಸಂದರ್ಭದಲ್ಲಿ ಜೋಗೀಂದರ್ ನನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ. 2017ರ ಜೂನ್ನಲ್ಲಿ ಜೋಗೀಂದರ್ ನನ್ನನ್ನು ಆತನ ಸಹೋದರನಿಗೆ ಪರಿಚಯಿಸಿದ. ಈತ ಫರೀದಾಬಾದ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದ. ಆತನೂ ನನ್ನ ಮೇಲೆ ಅತ್ಯಾಚಾರ ಎಸಗಿದ...'' ಎಂದು ಮಹಿಳೆ ದಾಖಲಿಸಿರುವ ರೇಪ್ ಮತ್ತು ಬ್ಲಾಕ್ ಮೇಲ್ ದೂರಿನಲ್ಲಿ ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, "ಈಗ ಜೋಗೀಂದರ್ ಹಣಕ್ಕಾಗಿ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನನ್ನ ಆಕ್ಷೇಪಾರ್ಹ ಫೋಟೋಗಳು ಆತನ ಬಳಿ ಇದ್ದು, ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಾ ಹಣ ಮತ್ತು ಸೆಕ್ಸ್ ಗೆ ಒತ್ತಾಯಿಸುತ್ತಿದ್ದಾನೆ. ಆತನ ಬೇಡಿಕೆ ತೀರಿಸದಿದ್ದರೆ ಆತ ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮಕ್ಕೆ ಹಾಕುತ್ತೇನೆ ಎಂಬ ಬೆದರಿಕೆ ಹಾಕುತ್ತಿದ್ದಾನೆ" ಎಂದು ಮಹಿಳೆ ದೂರಿದ್ದಾರೆ.
ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದು, ಅದರಲ್ಲಿ ಜೋಗೀಂದರ್ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಜತಗೆ ದೂರು ನೀಡಿರುವ ಮಹಿಳಾ ಹೆಡ್ ಕಾನ್ಸ್ಟೆಬಲ್ ಕೂಡ ವಿವಾಹಿತಳೇ ಆಗಿದ್ದಾಳೆ ಎಂಬುದು ತಿಳಿದುಬಂದಿದೆ ಎಂದು ಪಲವಾಲ್ ಎಸ್ಪಿ ವಸೀಂ ಅಕ್ರಮ್ ತಿಳಿಸಿದ್ದಾರೆ.