ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವಾಗಲೇ ಮಾಜಿ ಸಿಎಂ ಹಾಗೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದೆ ತಡ ಎಲ್ಲೆಡೆ ವಾಜಪೇಯಿ ನಿಧರಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಈ ಬಗ್ಗೆ ಏಮ್ಸ್ ಆಸ್ಪತ್ರೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸಂಜೆ 5.30 ಕ್ಕೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ಏಮ್ಸ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ವಾಜಪೇಯಿ ಅವರು ವಿಧಿವಶರಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ಸಹ ‘ನನಗೆ ಪ್ರೇರಣೆಯಾಗಿದ್ದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ಮನಸ್ಸು ಭಾರವಾಗಿದೆ. ಶ್ರೇಷ್ಠ ನಾಯಕ ಹಾಗೂ ಅಪ್ರತಿಮ ದೇಶಭಕ್ತರಾಗಿದ್ದ ಅವರ ನಿಧನವು ದೇಶಕ್ಕೆ ಬಹುದೊಡ್ಡ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಟ್ವೀಟ್ ಮಾಡಿದ್ದರು.
ಆದರೆ, ಯಾವಾಗ ಅದು ಕೇವಲ ವದಂತಿ ಎಂದು ತಿಳಿಯಿತೋ, ಆ ಕೂಡಲೇ ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.