ಲಂಡನ್: ಬ್ರಿಟನ್ನಿನ ಖ್ಯಾತ ಲೇಖಕ, ಸಾಹಿತಿ, ನೋಬೆಲ್ ಪ್ರಶಸ್ತಿ ವಿಜೇತ ವಿ.ಎಸ್.ನೈಪಾಲ್ ಅವರು ಭಾನುವಾರ ಮುಂಜಾನೆ ಲಂಡನ್ನಿನ ನಿವಾಸದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 85 ವರ್ಷ ವಯಸ್ಸಾಗಿತ್ತು.
1932, ಆಗಸ್ಟ್ 17 ರಂದು ಜನಿಸಿದ ನೈಪಾಲ್, ಲಂಡನ್ನಿನ ಆಕ್ಸ್'ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ನಂತರ ಸಾಕಷ್ಟು ಕೃತಿಗಳನ್ನು ಬರೆದ ಇವರಿಗೆ ಎ ಬೆಂಡ್ ಇನ್ ದಿ ರಿವರ್, ಎ ಹೌಸ್ ಆಫ್ ಮಿ.ಬಿಸ್ವಾಸ್ ಪುಸ್ತಕಗಳು ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದವು.ಇದುವರೆಗೂ ಸುಮಾರು 30ಕ್ಕೂ ಅಧಿಕ ಪುಸ್ತಕಗಳನ್ನು ನೈಪಾಲ್ ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ನೈಪಾಲ್ ಸಲ್ಲಿಸಿದ್ದ ಗಮನಾರ್ಹ ಸೇವೆಗಾಗಿ 2001ರಲ್ಲಿ ನೋಬೆಲ್ ಪ್ರಶಸ್ತಿ ಲಭಿಸಿತ್ತು. ಅಲ್ಲದೆ, ಬೂಕರ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದ ಇವರಿಗೆ ಬ್ರಿಟನ್ ರಾಣಿ ಕ್ವೀನ್ ಎಲಿಜೆಬೆತ್ ಗೌರವಿಸಿ ಸನ್ಮಾನಿಸಿದ್ದರು.