ನವದೆಹಲಿ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(DMK) ಪಕ್ಷದ ಅಧಿನಾಯಕ ಎಂ.ಕರುಣಾನಿಧಿ(94) ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ವಯೋಸಹಜ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಜುಲೈ 28ರಂದು ಚೆನೈನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದರು. ಒಂದು ವಾರಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬಹುಅಂಗಾಂಗ ವೈಫಲ್ಯದಿಂದ ಆಗಸ್ಟ್ 7ರಂದು ಸಂಜೆ 6.30ಕ್ಕೆ ನಿಧನರಾದರು.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮುದುವೆಲ್ ಕರುಣಾನಿಧಿ ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದರು. ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಮತದಾರರು, ಕರುಣಾನಿಧಿ ಅಭಿಮಾನಿಗಳು ಅವರನ್ನು ಗೆಲ್ಲಿಸಿದ್ದರು. ಹೀಗಾಗಿ ಕರುಣಾನಿಧಿ ಅವರನ್ನು ಸೋಲಿಲ್ಲದ ಸರದಾರ ಎಂದೇ ತಮಿಳುನಾಡು ಜನತೆ ಕರೆಯುತ್ತಾರೆ.
ತಮಿಳುನಾಡಿನಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಕರುಣಾನಿಧಿ ಅವರು 'ಕಲೈಗ್ನಾರ್' ಎಂದೇ ಹೆಸರಾಗಿದ್ದಾರೆ. ಬರೋಬ್ಬರಿ 60 ವರ್ಷಗಳ ರಾಜಕೀಯ ಜೀವನ ನಡೆಸಿದ್ದ ಎಂ.ಕರುಣಾನಿಧಿ ಭಾರತದ ಪ್ರಮುಖ ರಾಜಕಾರಣಿ.
ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಮಗನಾಗಿ 1924ರ ಜೂನ್ 3ರಲ್ಲಿ ಜನಿಸಿದ ಕರುಣಾನಿಧಿಯವರ ಮೊದಲ ಹೆಸರು ದಕ್ಷಿಣಾಮೂರ್ತಿ. ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಆಗಿನ ತಂಜಾವೂರು(ಈಗ ತಿರುವರೂರ್ ಜಿಲ್ಲೆ) ಜಿಲ್ಲೆಯ ತಿರುಕ್ಕುವಲೈ ಇವರ ಹುಟ್ಟೂರು. ಇವರು ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದವರು. ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿದ ಕರುಣಾನಿಧಿ, ಮುಂದಿನ ದಿನಗಳಲ್ಲಿ ದ್ರಾವಿಡಿಯನ್ ಚಳವಳಿಗಳ ಮುಖ್ಯ ಪಾತ್ರ ವಹಿಸಿದರು.
ಡಿಎಂಕೆ ಸ್ಥಾಪಕ ಸಿ.ಎನ್. ಅಣ್ಣಾದೊರೈ 1969ರಲ್ಲಿ ತೀರಿಹೋದ ನಂತರ ಇವರು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ನಾಯಕತ್ವ ವಹಿಸಿಕೊಂಡರು. ಅಲ್ಲದೆ, ದೀರ್ಘಕಾಲದ ರಾಜಕೀಯ ವೃತ್ತಿಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮೂಲಕ ದಾಖಲೆ ಮಾಡಿದ್ದಾರೆ.
ಕರುಣಾನಿಧಿ ಅವರ ಸಮ್ಮಿಶ್ರಕೂಟವು 2006ರ ಮೇಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಮುಖ ವಿರೋಧಿ ಜೆ. ಜಯಲಲಿತಾರನ್ನು ಸೋಲಿಸಿದರಲ್ಲದೆ, 2006ರ ಮೇ 13ರಲ್ಲಿ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದ ಕರುಣಾನಿಧಿ, 1962 ರಲ್ಲಿ ತಂಜಾವೂರು, 1967, 1971ರಲ್ಲಿ ಸೈದಾಪೇಟ್, 1977 ಮತ್ತು 1980ರಲ್ಲಿ ಅಣ್ಣಾನಗರ್, 1989 ಮತ್ತು 1991ರಲ್ಲಿ ಹಾರ್ಬರ್, 1996 ರಿಂದ 2006ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಚೇಪಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಇವರು 1957 ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 13 ಬಾರಿ ಆಯ್ಕೆಯಾಗಿದ್ದರು.
ಡಿಎಂಕೆ ಮುಖ್ಯಸ್ಥರಾಗಿರುವ ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಕರುಣಾನಿಧಿ ಅವರ ಮೊದಲ ಪತ್ನಿ ಪದ್ಮಾವತಿ, ಎರಡನೇ ಪತ್ನಿ ದಯಾಳು ಮತ್ತು ಮೂರನೇ ಪತ್ನಿ ರಜತಿ. ಅಲ್ಲದೆ, ಎಲ್ಲಾ ಪತ್ನಿಯರೂ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು, ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಅವರು ತಮ್ಮ ಅಧಿಕಾರವನ್ನು ವಿಸ್ತರಿಸಿ ರಾಜಕೀಯದಲ್ಲಿ ಮತ್ತಷ್ಟು ಭದ್ರವಾಗಿ ನೆಲೆಯೂರಲು ಸಹಕಾರಿಯಾಯಿತು. ಈ ಮೂವರು ಪತ್ನಿಯರಿಂದ 6 ಮಕ್ಕಳನ್ನು ಕರುಣಾನಿಧಿ ಹೊಂದಿದ್ದಾರೆ. ಅವರಲ್ಲಿ ಎಂ.ಕೆ.ಮುತ್ತು, ಎಂ.ಕೆ.ಅಲಗಿರಿ, ಎಂ.ಕೆ.ಸ್ಟಾಲಿನ್ ಮತ್ತು ಎಂ.ಕೆ.ತಮಿಳರಸು ಪುತ್ರರಾದರೆ, ಸೆಲ್ವಿ ಮತ್ತು ಕನಿಮೋಜಿ ಪುತ್ರಿಯರಾಗಿದ್ದಾರೆ.
ಎಂ.ಕರುಣಾನಿಧಿ ಕೇವಲ ರಾಜಕೀಯ ಧುರೀಣರಷ್ಟೇ ಅಲ್ಲ, ಕವಿ, ವಾಗ್ಮಿ ಮತ್ತು ಚಲನಚಿತ್ರಗಳಿಗೆ ಕಥಾಕಾರರೂ ಆಗಿದ್ದರು. ಅವರ ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳು ದ್ರಾವಿಡ ಚಳವಳಿಯ ಸಮಾಜವಾದಿ ಮತ್ತು ವಿಚಾರವಾದಿ ಸಿದ್ಧಾಂತಗಳನ್ನು ಪ್ರಸಾರ ಮಾಡಿತು. ಇದೇ ಮುಂದೆ ಅವರು ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗಿಸಿತು.
ತಮ್ಮ 20ನೇ ವಯಸ್ಸಿನಲ್ಲಿಯೇ ಜುಪಿಟರ್ ಪಿಕ್ಚರ್ಸ್‌ನಲ್ಲಿ ಕಥಾಲೇಖಕರಾಗಿ ಕೆಲಸ ಆರಂಭಿಸಿದ ಕರುಣಾನಿಧಿಯವರ ಮೊದಲ ಸಿನಿಮಾ ರಾಜಕುಮಾರಿ ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಇಲ್ಲಿ ಕಥಾಲೇಖಕರಾಗಿ ಅವರ ಕೌಶಲಗಳು ಗೋಚರವಾದವು. ಅವರು ಬರೆದ ಪ್ರಮುಖ ಕೃತಿಗಳೆಂದರೆ ಸಾಂಗ ಥಿಮಝ್, ತಿರುಕುರಾರಲ್ ಉರಾಯ್, ಪೊನ್ನಾರ್ ಶಂಕರ್, ರೋಮಾಪುರಿ ಪಾಂಡಿಯನ್, ತೆನ್ಪಾಂಡಿ ಸಿಂಗಮ್, ವೆಲ್ಲಿಕಿಝಾಮೈ, ನಂಜುಕ್ಕು ನೀಧಿ, ಇನಿಯವೈ ಇರುಬತು ಮತ್ತು ಕುರಾಲೊವಿಯಮ್ ಸೇರಿವೆ. ಅವರ ಗದ್ಯ ಮತ್ತು ಕವಿತೆಯ ಪುಸ್ತಕಗಳ ಸಂಖ್ಯೆ 100 ಕ್ಕಿಂತ ಹೆಚ್ಚು. ಅವರು ತಮಿಳು ಚಲನಚಿತ್ರೋದ್ಯಮದಲ್ಲಿ ತಮ್ಮ ಬರವಣಿಗೆಯ ಕೃತಿಗಳಿಗೆ ಹೆಸರಾಗಿದ್ದಾರೆ.
ಕರುಣಾನಿಧಿ ಅವರು 1970 ರಲ್ಲಿ ಪ್ಯಾರಿಸ್ನಲ್ಲಿ ನಡೆದ 3 ನೇ ವಿಶ್ವ ತಮಿಳು ಸಮ್ಮೇಳನದ ಉದ್ಘಾಟನಾ ದಿನ ಮತ್ತು 1987 ರಲ್ಲಿ ಕೌಲಾಲಂಪುರ್(ಮಲೇಷಿಯಾ)ನಲ್ಲಿ ನಡೆದ 6 ನೇ ವಿಶ್ವ ತಮಿಳು ಸಮ್ಮೇಳನಗಳಲ್ಲಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡಿದ್ದರು.
ಅವರ ರಾಜಕೀಯ ಜೀವನದ ಬಗ್ಗೆ ಒಟ್ಟಾರೆ ಹೇಳುವುದಾದರೆ, ತಮಿಳುನಾಡಿನ ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ಉಳಿವಿಗೆ ಎಂ.ಕರುಣಾನಿಧಿ ಆಧಾರ ಸ್ತಂಬವಾಗಿದ್ದರು. ಪಕ್ಷದ ಉಳಿವಿಗೆ, ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದ ಕರುಣಾನಿಧಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಧೀಮಂತ ರಾಜಕಾರಣಿಯನ್ನು "ಕಲೈಗ್ನಾರ್" ಎಂದೇ ಕರೆಯಲಾಗುತ್ತದೆ.