ಧಾರವಾಡ: ಅದೃಷ್ಟ.. ಈ ಪದ ಕೇಳಿದ ತಕ್ಷಣ ಕೆಲವರಿಗೆ ತಮಗೆ ಅದೃಷ್ಟ ತಂದುಕೊಟ್ಟ ಲಕ್ಕಿ ವಸ್ತುಗಳು ನೆನಪಾಗುತ್ತವೆ. ಇನ್ನೂ ಕೆಲವರಿಗೆ ತಮಗೆ ಶುಭ ಕಾರ್ಯಗಳಲ್ಲಿ ಶುಭ ತಂದ, ಇದು ನನ್ನ ಲಕ್ಕಿ ಅನ್ನೋ ಎಲ್ಲ ವಸ್ತುಗಳು ಹಾಗೇ ಕಣ್ಮುಂದೆ ಬರುತ್ತವೆ. ಯಾವುದೇ ಶುಭ ಕಾರ್ಯ ಆರಂಭಿಸಬೇಕಾದರೂ ಆ ವಸ್ತುಗಳ ಬಳಕೆ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಅವರಲ್ಲಿರುತ್ತೆ. ಹಾಗೇ ಬಸವರಾಜ್ ಹೊರಟ್ಟಿ ಕೂಡ ತಮ್ಮ ನೆಚ್ಚಿನ ಕಾರ್, ಅದೃಷ್ಟದ ವಾಹನದಲ್ಲಿ ಬಂದು ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತೀಚೆಗೆ ಜ್ಯೋತಿಷ್ಯ ಶಾಸ್ತ್ರ ನಂಬಿ ಶುಭ ಕಾರ್ಯಗಳನ್ನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕುಟುಂಬಸ್ಥರು, ಪ್ರೇಮಿಗಳು, ವಿದ್ಯಾರ್ಥಿಗಳು, ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಸೇರಿದಂತೆ ರಾಜಕೀಯ ಗಣ್ಯರು ಜ್ಯೋತಿಷ್ಯವನ್ನ ಹೆಚ್ಚಾಗಿ ನಂಬುತ್ತಿದ್ದಾರೆ. ಅಲ್ಲದೇ ಜ್ಯೋತಿಷ್ಯದ ಪ್ರಕಾರ ಅದೃಷ್ಟ ಪಡೆಯೋಕೆ ತಮ್ಮ ಲಕ್ಕಿ ವಸ್ತುಗಳ ಬಳಕೆ ಕೂಡ ಮಾಡ್ತಾರೆ. ಹಾಗೇ ರಾಜಕೀಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ಗಣ್ಯರು ಅದೃಷ್ಟದ ಮೊರೆ ಹೋಗ್ತಾರೆ.
ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಎಸ್ವೈ ಪುತ್ರನಿಗೆ ಟಿಕೆಟ್ ಮಿಸ್... ಕಟೀಲ್ ಹೀಗ್ಯಾಕೆ ಹೇಳಿದ್ರು?
ಇದೇ ರೀತಿ ಮಾಜಿ ಸಭಾಪತಿ ತಮ್ಮ ಹಳೆಯ ಅಂಬಾಸಿಡರ್ ಕಾರು ಹತ್ತಿ, ನಾಮಪತ್ರ ಸಲ್ಲಿಸೋಕೆ ಬಂದಿದ್ರು. ಹೊರಟ್ಟಿ ಅವರು 8ನೇ ಬಾರಿಗೆ ಮೇಲ್ಮನೆ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಬಸವರಾಜ್ ಹೊರಟ್ಟಿ, ಎಂಎಲ್ಸಿ ಚುನಾವಣೆ ಗೆದ್ದು ಈ ಬಾರಿ ದಾಖಲೆ ಬರೆಯೋಕೆ ರೆಡಿಯಾಗಿದ್ದಾರೆ. ನಾಮಪತ್ರ ಸಲ್ಲಿಸಿ ಹೊರಬಂದ ಹೊರಟ್ಟಿ, ತಮ್ಮ ಲಕ್ಕಿ ಕಾರಿನ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.
ಅಂಬಾಸಿಡರ್ನಲ್ಲಿ ಬಂದು ನಾಮಪತ್ರ ಸಲ್ಲಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಂಬಾಸಿಡರ್ ಕಾರಿನ ಬಗ್ಗೆ ಅದೆನೋ ಒಂದು ಭಾವನಾತ್ಮಕ ಸಂಬಂಧ ಇದೆ. ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ ಇದೆ. ಆ ಪ್ರೀತಿಗಾಗಿ ನಾಮಿನೇಷನ್ ಫೈಲ್ ಮಾಡೋಕೆ ತಗೊಂಡು ಬಂದಿದ್ದೇನೆ. ಈಗಾಗಲೇ ಅದು 8 ಲಕ್ಷ ಕಿ.ಮೀ. ಓಡಿದೆ. ಅದ್ರೂ ಇನ್ನೂ ಕಾರು ಚಾಲ್ತಿಯಲ್ಲಿದೆ. ಇನ್ನು ಈ CNB 5757 ನಂಬರ್ ಅಂದ್ರೆ ಬಹಳ ಜನರಿಗೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು. ಅದೇ ನನ್ನ ತಲೆಯಲ್ಲಿದೆ. ಹೀಗಾಗಿ ಕುಟುಂಬದ ಶುಭ ಕಾರ್ಯಗಳಲ್ಲಿ ಈ ಕಾರು ಬಳಸುತ್ತೇವೆ ಎಂದರು. ಇನ್ನು ಈ ಅಂಬಾಸಿಡರ್ ಕಾರು ಅವರಿಗೆ ಅದೃಷ್ಟದ ಸಂಕೇತ ಎಂದು ನಂಬಿದ್ದಾರೆ ಎನ್ನಲಾಗುತ್ತೆ. ಹೀಗಾಗಿ ಪ್ರತಿ ಬಾರಿಯೂ ಯಾವುದೇ ಶುಭ ಕಾರ್ಯಗಳಿಗೆ ಹೊರಟ್ಟಿ ಇದೇ ಕಾರನ್ನ ಬಳಸುತ್ತಾರೆ.
ಇದನ್ನೂ ಓದಿ: ‘ಅಡುಗೆ ರೆಡಿ ಮಾಡಿದ್ದು ನಾನು, ಬೇರೆಯವರು ಬರೇ ತಿನ್ನುವುದಕ್ಕಾ?’
ಈ ಅಂಬಾಸಿಡರ್ ಕಾರಿಗಿದೆ 28 ವರ್ಷಗಳ ಇತಿಹಾಸ!
ಬಸವರಾಜ್ ಹೊರಟ್ಟಿ ಅವರ ಈ ಕಾರು 1994ನೇ ವರ್ಷದ್ದಾಗಿದೆ. ಅಲ್ಲಿಂದ ಇಲ್ಲಿಯವರೆಗೂ ಈ ಕಾರನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಅಂದಿನಿಂದ ಬಸವರಾಜ್ ಹೊರಟ್ಟಿ ಅವರಿಗೆ ಈ ಕಾರ್ ಅಂದ್ರೆ ಅದೃಷ್ಟದ ವಾಹನವಾಗಿದೆ. ಹೀಗಾಗಿ ತಮ್ಮ ಮೊದಲನೇ ಚುನಾವಣೆಯಿಂದ ಈಗಿನ ಚುನಾವಣೆಗಳವರೆಗೂ ಇದೇ ಕಾರಿನಲ್ಲಿ ಬಂದು ಬಸವರಾಜ್ ಹೊರಟ್ಟಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ದೇಶದಲ್ಲೇ ಏಳು ಸಲ ಯಾರೂ ಪರಿಷತ್ಗೆ ಆರಿಸಿ ಬಂದಿಲ್ಲ. ಆದ್ರೆ ಹೊರಟ್ಟಿ ಅವರ ಹೆಸರಲ್ಲಿ ಈ ದಾಖಲೆ ಇದ್ದು, ಈಗ 8ನೇ ಬಾರಿ ಆರಿಸಿ ಬಂದ್ರೆ ದೊಡ್ಡ ದಾಖಲೆಯಾಗಲಿದೆ. ಒಟ್ನಲ್ಲಿ ಹೊರಟ್ಟಿ ತಮ್ಮ ನೆಚ್ಚಿನ ಕಾರ್ ಹತ್ತಿ ಬಂದು ಪರಿಷತ್ ಫೈಟ್ಗೆ ಮುಂದಾಗಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಲಕ್ಕಿ ಕಾರ್ ಅವರ ಅದೃಷ್ಟವನ್ನು ಬದಲಾಯಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.