ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಇಂದಿಗೆ 65 ವಸಂತಗಳನ್ನು ಪೂರೈಸಿ 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕಲಿಯುಗದ ಕರ್ಣ ತಮ್ಮ ಜೆಪಿ ನಗರ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಂಡ್ಯದ ಗಂಡಿಗೆ 100 ಕೆಜಿ ಸೇಬಿನ ಹಾರ ಹಾಕಿ ಅಭಿಮಾನಿಗಳು ಶುಭಾಶಯ ಕೋರಿದರು.
ನಿನ್ನೆಯಷ್ಟೇ ತಮ್ಮ ಪುತ್ರ ಅಭಿಷೇಕ್ ಅವರ ಅಮರ್ ಚಿತ್ರಕ್ಕೆ ಮುಹೂರ್ತ ಮಾಡಿ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಅಂಬಿ, 49 ವರ್ಷ ಚಿತ್ರರಂಗದಲ್ಲಿ ನನ್ನನ್ನು ಬೆಳೆಸಿದ್ದಾರೆ. ಇಷ್ಟು ವರ್ಷ ಅವರಿಗೆ ಮನರಂಜನೆ ನೀಡಿದ್ದೇನೆ. ಈಗ ನನ್ನ ಮಗನನ್ನು ಅವರಿಗೆ ಒಪ್ಪಿಸಿದ್ದೇನೆ ಎಂದು ಹೇಳಿದರು.
ಅಂಬಿಗೆ ಚಾಲೆಂಜಿಂಗ್ ಸ್ಟಾರ್ ಅವರದ್ದೇ ಮೊದಲ ಗಿಫ್ಟ್ ಹಾಗೂ ಮೊದಲ ಕೇಕ್
66ನೇ ವಸಂತಕ್ಕೆ ಕಾಲಿಟ್ಟ 'ಅಂಬಿ'ಗೆ ಪ್ರತಿ ವರ್ಷದಂತೆ ಈ ವರ್ಷವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಮೊದಲ ಗಿಫ್ಟ್ ಹಾಗೂ ಮೊದಲ ಕೇಕ್ ನೀಡಿದ್ದಾರೆ. ಸುಮಲತಾ ಅಂಬರೀಶ್ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಫೋಟೋ ಅಪ್ಲೋಡ್ ಮಾಡಿದ್ದು, ಕೇಕ್ ಫೋಟೋ ಬ್ಲರ್ ಮಾಡುವ ಮೂಲಕ ಅದು ಯಾವ ರೀತಿಯ ಕೇಕ್ ಎನ್ನುವ ಗುಟ್ಟನ್ನು ಮಾತ್ರ ಸುಮಲತಾ ಬಿಟ್ಟು ಕೊಟ್ಟಿಲ್ಲ.
ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಈ ಶುಭದಿನದಂದು ದೇವರು ಇನ್ನು ಹೆಚ್ಚು ಆರೋಗ್ಯ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಶುಭಕೋರುತ್ತೇನೆ ಎಂದು ದರ್ಶನ್ ತೂಗುದೀಪ್ ಟ್ವೀಟ್ ನಲ್ಲಿ ಸಹ ಶುಭಕೋರಿದ್ದಾರೆ.
ಎಷ್ಟೇ ವರ್ಷಗಳು ಕಳೆದರೂ ಸಹ ಅದೇ ಹುಮ್ಮಸ್ಸು, ವರ್ಚಸ್ಸು, ಗತ್ತು ಕಾಪಾಡಿಕೊಂಡು ಬಂದಿರುವ ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಈ ಶುಭದಿನದಂದು ದೇವರು ಇನ್ನು ಹೆಚ್ಚು ಆರೋಗ್ಯ, ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಶುಭಕೋರುತ್ತೇನೆ 😊 @sumalathaA pic.twitter.com/PsZe9le80w
— Darshan Thoogudeepa (@dasadarshan) May 29, 2018