ತೂತುಕುಡಿ: ತೂತುಕುಡಿಯಲ್ಲಿರುವ ಸ್ಟೆರ್ಲೈಟ್ ಕಾಪರ್ ಕಂಪನಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ನಿಂದಾಗಿ 9 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇದೇ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳು, 2 ಪೊಲೀಸ್ ಜೀಪ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಇನ್ನಷ್ಟು ವಾಹನಗಳು ಜಖಂಗೊಂಡಿವೆ. ಅಲ್ಲದೆ ಜಿಲ್ಲಾಡಳಿತ ಕಚೇರಿ ಹಾಗೂ ಸ್ಟರ್ಲೈಟ್ ನೌಕರರ ವಸತಿ ಗೃಹಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಮಹಿಳೆಯರು ಸೇರಿದಂತೆ ಸುಮಾರು 9 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
#WATCH Protest held in Tuticorin demanding ban on Sterlite Industries, in wake of the pollution created by them #TamilNadu pic.twitter.com/23FWdj1do5
— ANI (@ANI) May 22, 2018
ಸ್ಟರ್ಲೈಟ್ ಕಾಪರ್ ಕಂಪನಿಯಿಂದ ಹೊರಬರುತ್ತಿರುವ ವಿಷಪೂರಿತ ಹೊಗೆಯಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಹಾಗಾಗಿ ಕಂಪೆನಿಯನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ತೂತುಕುಡಿಯಲ್ಲಿನ ಸ್ಥಳೀಯರು ನಡೆಸುತ್ತಿರುವ ಪ್ರತಿಭಟನೆ ತದಿನಕ್ಕೆ ಕಾಲಿಡುತ್ತಿದ್ದಂತೆ ಹಿಂಸಾರೂಪಕ್ಕೆ ಕಾರಣವಾಯಿತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಹಿಂಸಾಚಾರ ಭುಗಿಲೆದಿದ್ದು, ಕಾನೂನು ವಿಭಾಗದ ಎಡಿಜಿಪಿ ಹೆಚ್ಚುವರಿ ಬೆಟಲಿಯನ್ ನೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಡುವಂತಾಯಿತು. ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದಂತೆ ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಹಾಗೂ ಲಾಠಿ ಚಾರ್ಜ್ ನಡೆಸಿದರು.
ಸೆಕ್ಷನ್ 144 ರ ಪ್ರಕಾರ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಲ್ಲದೆ ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ 4000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.