ಬೆಂಗಳೂರು: ಉತ್ತರಪ್ರದೇಶದ ಗೋರಖ್ಪುರ್ ಮತ್ತು ಫುಲ್ಪುರ್ ಉಪಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲನ್ನು ಅನುಭವಿಸಿದ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಬುಧವಾರ ರಾತ್ರಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಕರ್ನಾಟಕಕ್ಕೆ ಪಾಠ ಹೇಳುವುದನ್ನು ಬಿಟ್ಟು ಉತ್ತರಪ್ರದೇಶದ ಅಭಿವೃದ್ಧಿ ಕಡೆಗೆ ಗಮನಹರಿಸಿ" ಎಂದು ಯೋಗಿ ಆದಿತ್ಯನಾಥ್'ಗೆ ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶ ಉಪಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವನ್ನು ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. ಈ ಹಿಂದೆ ಯೋಗಿ ಆದಿತ್ಯನಾಥ್ ಮತ್ತು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಆ ಕ್ಷೇತ್ರಗಳಲ್ಲಿ ಗೆದ್ದಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯಿಂದಾಗಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
BJP has suffered humiliating loss in the Lok Sabha seats held by the CM & DyCM of UP. Congratulations to SP & BSP for this historic victory. Unity among the non-BJP parties has played a key role.
Perhaps Yogi Adityanath should spend less time lecturing Karnataka on development.
— Siddaramaiah (@siddaramaiah) March 14, 2018
ಕರ್ನಾಟಕದ ಮುಖ್ಯಮಂತ್ರಿ ಮತ್ತು ಉತ್ತರಪ್ರದೇಶದ ಬಿಜೆಪಿ ನಾಯಕರ ನಡುವಿನ ಟ್ವೀಟ್ ಸಮರ ಇದೇ ಮೊದಲಲ್ಲ. ಈ ಹಿಂದೆ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ನೀಡಿದ ಎರಡು ಭೇಟಿಯಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಹಿನ್ನಡೆ ಸಾಧಿಸಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದರು. ಅಷ್ಟೇ ಅಲ್ಲ, ಇಬ್ಬರೂ ಅಭಿವೃದ್ಧಿ ಮತ್ತು ಆಡಳಿತದ ವಿಷಯದಲ್ಲಿ ಪರಸ್ಪರ ಟ್ವಿಟರ್ ದಾಳಿ ನಡೆಸಿದ್ದರು.