ಅದು 2014 ರ ಸಾರ್ವತ್ರಿಕ ಚುನಾವಣಾ ಪ್ರಚಾರದ ಸಂದರ್ಭ,ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಉದ್ದೇಶಿಸಿ ಶ್ರೇಷ್ಠ ಹವಾಮಾನ ತಜ್ಞ (ಮೌಸಮ್ ವೈಜ್ಞಾನಿಕ್) ಎಂದು ತಮಾಷೆ ಮಾಡಿದ್ದರು. ಇದಾದ ನಂತರ ಪಾಸ್ವಾನ್ ಮೋದಿ ಅಲೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದಲ್ಲಿನ ಎನ್ಡಿಎ ಸರ್ಕಾರದ ಭಾಗವಾಗಿದ್ದರು.
ಲಾಲೂ ಪ್ರಸಾದ್ ಯಾದವ್ ಪಾಸ್ವಾನ್ ಅವರನ್ನು ಹೀಗೆ ಯಾವಾಗಲೂ ಚುನಾವಣಾ ರ್ಯಾಲಿಯಲ್ಲಿ 'ವೊ ಸಬ್ಸೆ ಬಡೆ ಮೌಸಮ್ ವೈಜ್ಞಾನಿಕ್ ಹೈ, ‘ಪೂಸಾ’ ವಾಲಾ ನಹಿ, ಇಸ್ರೋ ವಾಲಾ (ಅವರು ಶ್ರೇಷ್ಠ ವೈಜ್ಞಾನಿಕ ಹವಾಮಾನ ತಜ್ಞರಾಗಿದ್ದಾರೆ, ‘ಪುಸಾ’ವಾಲಾ ಅಲ್ಲ, ಇಸ್ರೋ ವಾಲಾ) ಎಂದು ವ್ಯಂಗ್ಯವಾಡುತ್ತಿದ್ದರು.
ಒಂದರ್ಥದಲ್ಲಿ ಪಾಸ್ವಾನ್ ಕುರಿತಾದ ಲಾಲೂ ಪ್ರಸಾದ್ ಅವರ ಈ ಮಾತು ಅಕ್ಷರಶಃ ಸತ್ಯ ಎಂದು ಹೇಳಬಹುದು. ಏಕೆಂದರೆ ಅವರು ರಾಜಕೀಯ ಗಾಳಿ ಯಾವ ಕಡೆ ಬೀಸುತ್ತಿದೆ ಎನ್ನುವುದನ್ನು ಗ್ರಹಿಸುವ ಚಾಣಾಕ್ಷ ರಾಜಕಾರಣಿಯಾಗಿದ್ದರು. ಬಹುಶಃ ಇದೇ ಕಾರಣದಿಂದಲ್ಲೇ ಅವರು ರಾಷ್ಟ್ರೀಯ ರಂಗ, ಸಂಯುಕ್ತ ರಂಗ, ಎನ್ದಿಎ ಹಾಗೂ ಯುಪಿಎ ಹಾಗೂ ಸರ್ಕಾರಗಳಲ್ಲಿಯೂ ಮಹತ್ವದ ಕ್ಯಾಬಿನೆಟ್ ಸಚಿವ ಖಾತೆಯನ್ನು ಹೊಂದಿದ್ದರು. ಇದುವರೆಗೆ ಅವರು ಆರು ಪ್ರಧಾನ ಮಂತ್ರಿಗಳ ಕ್ಯಾಬಿನೆಟ್ ನಲ್ಲಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ ಅಪರೂಪದ ರಾಜಕಾರಣಿಯಾಗಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ 1946ರ ಜುಲೈ 5 ರಂದು ಬಿಹಾರದ ಖಗರಿಯಾ ಜಿಲ್ಲೆಯ ಶಹರ್ ಬನ್ನಿ ಎನ್ನುವ ಗ್ರಾಮದಲ್ಲಿನ ದಲಿತ ದುಸಧ ಸಮುದಾಯದಲ್ಲಿ ಜನಿಸಿದರು.ಪಾಟ್ನಾ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾಗಿದ್ದ ಪಾಸ್ವಾನ್ 1969 ರಲ್ಲಿ ತಮ್ಮ 23 ನೇ ವಯಸ್ಸಿನಲ್ಲಿಯೇ ಸಂಯುಕ್ತ ಸೋಷಿಯಲಿಸ್ಟ್ ಪಾರ್ಟಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಅವರು ಬಿಹಾರದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಿಂದಾಗಿ ಅವರಿಗೆ ಡಿಎಸ್ಪಿ ಹುದ್ದೆಯ ಅವಕಾಶ ಸಹ ಬಂದೊದಗಿರುತ್ತದೆ, ಆದರೆ ಅದೆಲ್ಲವನ್ನು ಬಿಟ್ಟು ಪಾಸ್ವಾನ್ ಸಕ್ರಿಯ ರಾಜಕಾರಣವನ್ನೇ ತಮ್ಮ ಅಂತಿಮ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಾರೆ.
ಪಾಸ್ವಾನ್ ಅವರು ಸಮಾಜವಾದಿ ನಾಯಕರುಗಳಾದ ರಾಜ್ ನರೈನ್ ಹಾಗೂ ಜಯಪ್ರಕಾಶ್ ನಾರಾಯಣ್ ಅವರಿಂದ ಪ್ರಭಾವಿತರಾಗಿ 1974ರಲ್ಲಿ ಸ್ಥಾಪನೆಯಾದ ಲೋಕದಳದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಕಾಂಗ್ರೆಸ್ ವಿರೋಧಿ ಹಾಗೂ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಜೈಲು ಸೇರುತ್ತಾರೆ. ತುರ್ತುಪರಿಸ್ಥಿತಿಯ ನಂತರದ ಚುನಾವಣೆಯಲ್ಲಿ (1977) ಹಾಜಿಪುರ್ ಲೋಕಸಭಾ ಕ್ಷೇತ್ರದಿಂದ ಜನತಾ ಪಕ್ಷದ ಮೂಲಕ ಅವರು ಬರೋಬ್ಬರಿ ನಾಲ್ಕು ಲಕ್ಷ ಮತಗಳಿಂದ ಗೆಲ್ಲುವ ಮೂಲಕ ಅವರು ದೇಶದೆಲ್ಲೆಡೆ ಚಿರಪರಿಚಿತರಾಗುತ್ತಾರೆ. ಅಲ್ಲಿಂದ ಪಾಸ್ವಾನ್ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ, 1980, 1989, 1996 1998, 1999, 2004, 2014 ರ ಲೋಕಸಭಾ ಚುನಾವಣೆಗಳಲ್ಲಿ ಜಯಬೇರಿ ಭಾರಿಸಿದರು.
ಮಂಡಲ್ ಆಯೋಗದ ವರದಿ ಮತ್ತು ಪಾಸ್ವಾನ್ ಪಾತ್ರ:
90 ರ ದಶಕದಲ್ಲಿನ ಈ ಮಂಡಲ್ ರಾಜಕೀಯ ಬಿಹಾರದಲ್ಲಿನ ಜಾತಿ ಸಮೀಕರಣವನ್ನೇ ಬದಲಿಸಿತು ಎಂದು ಹೇಳಬಹುದು. ಈ ಹಿನ್ನಲೆಯನ್ನು ನಾವು ಅರ್ಥೈಸಿಕೊಳ್ಳಬೇಕಾದರೆ ರಾಜಕೀಯ ಬೆಳವಣಿಗೆಯನ್ನು ಮೂರು ಹಂತಗಳಾಗಿ ವಿಂಗಡಿಸುವುದು ಒಳ್ಳೆಯದು.ಬಿಹಾರದ ರಾಜಕೀಯದ ಮೊದಲನೇ ಹಂತದಲ್ಲಿ (1947-67) ಮೇಲ್ಜಾತಿಯವರನ್ನು ಒಳಗೊಂಡ ಕಾಂಗ್ರೆಸ್ ಪಕ್ಷದ ಆಡಳಿತವೇ ಹೆಚ್ಚಾಗಿ ಪ್ರಾಬಲ್ಯವನ್ನು ಮೆರೆದಿತ್ತು, ಎರಡನೇ ಹಂತದಲ್ಲಿ (1967-1990) ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ತಗ್ಗಿದ್ದರೂ ಸಹಿತ ಮಧ್ಯಮ ವರ್ಗದ ಪ್ರಾತಿನಿಧಿಕತೆ ಅಧಿಕಗೊಂಡಿತು. ಇನ್ನು ಮೂರನೇ ಹಂತಕ್ಕೆ (1990 ರ ನಂತರ ) ಬಂದಾಗ ಬಿಹಾರದಲ್ಲಿ ಸಂಪೂರ್ಣ ರಾಜಕೀಯ ಧ್ರುವೀಕರಣವೇ ಸಂಭವಿಸಿತು ಎಂದು ಹೇಳಬಹುದು. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಮಂಡಲ್ ವರದಿಯ ಜಾರಿಯ ನಂತರ ರಾಜಕೀಯದಲ್ಲಿ ಹೆಚ್ಚಿದ ಹಿಂದುಳಿದ ವರ್ಗಗಳ ಪ್ರಾತಿನಿಧ್ಯತೆ.
1989 ರಲ್ಲಿ ಅಧಿಕಾರಕ್ಕೆ ಬಂದಂತಹ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ (ನ್ಯಾಷನಲ್ ಫ್ರಂಟ್) ಸರ್ಕಾರ ತಕ್ಷಣ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲು ಮುಂದಾಯಿತು. ಆ ಸಂದರ್ಭದಲ್ಲಿ ಅವರ ಸಂಪುಟದಲ್ಲಿ ಪ್ರಮುಖ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರು. ಪಾಸ್ವಾನ್ ಮತ್ತು ಶರದ್ ಯಾದವ್ ಆಗ ಹಿಂದುಳಿದ ವರ್ಗಗಳ ವಿಷಯವಾಗಿ ವಿ.ಪಿ.ಸಿಂಗ್ ಅವರ ಮುಖ್ಯ ಸಲಹೆಗಾರರಾಗಿದ್ದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಈ ವರದಿ ಜಾರಿಗೆ ಬಂದ ನಂತರ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಹೊಸ ರಾಜಕೀಯ ಅಲೆಯನ್ನೇ ಸೃಷ್ಟಿಸಿತು ಎಂದು ಹೇಳಬಹುದು. ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದರ ಪ್ರಭಾವ ಶಾಶ್ವತವಾದ ರಾಜಕೀಯ ಬದಲಾವಣೆಯನ್ನು ತಂದಿತು.
ಇದಾದ ನಂತರ ಎಚ್.ಡಿ ದೇವೇಗೌಡ ಹಾಗೂ ಐ.ಕೆ ಗುಜ್ರಾಲ್ ಅವರ ಯುನೈಟೆಡ್ ಫ್ರಂಟ್ (ಸಂಯುಕ್ತ ರಂಗ) ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ನೇಮಕಗೊಂಡರು. ತದನಂತರ ತಮ್ಮ ಬದಿಯನ್ನು ಬದಲಿಸುವ ಮೂಲಕ 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಂವಹನ ಮತ್ತು ನಂತರ ಕಲ್ಲಿದ್ದಲು ಸಚಿವರಾಗಿ ಕಾರ್ಯನಿರ್ವಹಿಸಿದರು.
2000 ರಲ್ಲಿ ಲೋಕ ಜನ ಪಕ್ಷವನ್ನು ಸ್ಥಾಪಿಸಿದ ಪಾಸ್ವಾನ್ ಮುಂದೆ 2002 ರ ಗುಜರಾತ್ ನಲ್ಲಿ ಗೋದ್ರಾ ಹತ್ಯಾಕಾಂಡದ ವಿಚಾರವಾಗಿ ವಾಜಪೇಯಿ ನೇತೃತ್ವದ ಎನ್ದಿಎ ಸರ್ಕಾರದ ಸಖ್ಯವನ್ನು ತೊರೆದರು. 2004 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡಿದರು, ಇದರ ಭಾಗವಾಗಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾಗಿ ನೇಮಕಗೊಂಡರು. ಮುಂದೆ ಅವರು 2009 ರಲ್ಲಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅವರು ಹಾಜಿಪುರದಿಂದ ಸೋಲುತ್ತಾರೆ. ರಾಜ್ಯಸಭೆಯಿಂದ ಸಂಸತ್ ಪ್ರವೇಶಿಸಿದರೂ ಕೂಡ ಅವರಿಗೆ ಯಾವುದೇ ಕೇಂದ್ರ ಸಚಿವ ಖಾತೆ ಖಚಿತವಾಗದ ಹಿನ್ನಲೆಯಲ್ಲಿ ಕಾಲಾಂತರದಲ್ಲಿ ಪಾಸ್ವಾನ್ ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದ್ದ ಆರ್ಜೆಡಿಯಿಂದ ಅಂತರವನ್ನು ಕಾಪಾಡಿಕೊಳ್ಳುತ್ತಾರೆ.
ಯುಪಿಎ-2 ಅವಧಿಯಲ್ಲಿ ಸಚಿವ ಸ್ಥಾನ ಸಿಗದೇ ನಿರಾಶರಾಗಿದ್ದ ಪಾಸ್ವಾನ್ ಮುಂದೆ 2014 ರ ಚುನಾವಣೆಗೂ ಮುಂಚಿತವಾಗಿಯೇ ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ. ಆಗ ದೇಶದೆಲ್ಲೆಡೆ ಇದ್ದ ಮೋದಿ ಅಲೆಯಿಂದಾಗಿ ಇದು ಒಂದು ರೀತಿಯಲ್ಲಿ ಅವರಿಗೆ ವರವಾಗಿ ಪರಿಣಮಿಸುತ್ತದೆ. ಪಾಸ್ವಾನ್, ಮಗ ಚಿರಾಗ್ ಮತ್ತು ಸಹೋದರ ರಾಮ್ ಚಂದ್ರ ಸೇರಿದಂತೆ ಏಳು ಸ್ಥಾನಗಳಲ್ಲಿ ಆರು ಸ್ಥಾನಗಳನ್ನು ಲೋಕಜನಶಕ್ತಿ ಪಕ್ಷ ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಆಗ ಅವರನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರನ್ನಾಗಿ ನೇಮಕ ಮಾಡಲಾಯಿತು. ಮುಂದೆ 2019ರಲ್ಲಿ ರಾಮ್ ವಿಲಾಸ್ ಪಾಸ್ವಾನ್, ಹಾಜಿಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ರಾಜ್ಯಸಭೆ ಮೂಲಕ ಸಂಸತ್ ಗೆ ಪ್ರವೇಶಿಸುತ್ತಾರೆ. ಆಗ ಮೋದಿ ಅಲೆಯ ಮೇಲೆ ಲೋಕಜನಶಕ್ತಿ ಪಕ್ಷ ತಾನು ಸ್ಪರ್ಧಿಸಿದ ಎಲ್ಲಾ ಆರು ಸ್ಥಾನಗಳನ್ನು ಗೆಲ್ಲಲು ಯಶಸ್ವಿಯಾಗುತ್ತದೆ.
ತಳಮಟ್ಟದಿಂದ ರಾಜಕಾರಣಕ್ಕೆ ಪ್ರವೇಶಿಸಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಸೈದ್ದಾಂತಿಕವಾಗಿ ಗಟ್ಟಿಗೊಳಿಸಿದ್ದು ಲೋಹಿಯಾ ಮತ್ತು ಜೆಪಿ ಅವರ ಸಮಾಜವಾದಿ ವಿಚಾರಧಾರೆಗಳು ಎಂದು ಹೇಳಬಹುದು. ಬಹುಶಃ ಇದೇ ಕಾರಣಕ್ಕಾಗಿ ಏನೋ ಅವರು ತಮ್ಮನ್ನು ಸಮಾಜವಾದಿ ಎಂದು ಕರೆದುಕೊಳ್ಳುತ್ತಿದ್ದರು.
ಸಾಮಾನ್ಯವಾಗಿ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ನಿಲುವನ್ನು 'ಅವಕಾಶವಾದಿ ರಾಜಕಾರಣ' ಎನ್ನುವ ಸೀಮಿತ ಧೃಷ್ಟಿಕೋನದಿಂದ ನೋಡಲಾಗುತ್ತದೆ.ಇಂತಹ ವ್ಯಾಖ್ಯಾನಗಳಿಂದಾಗಿ 50 ವರ್ಷಗಳ ಸುದೀರ್ಘ ರಾಜಕಾರಣದಲ್ಲಿನ ಅವರ ಮಹತ್ವದ ಕೊಡುಗೆಗಳನ್ನು ಮರೆಮಾಚುವ ಹುನ್ನಾರವನ್ನು ನಾವು ಕಾಣುತ್ತೇವೆ. ಅವರ ಕೆಲವು ಕೊಡುಗೆಗಳನ್ನು ಸ್ಮರಿಸುವುದಾದಲ್ಲಿ, ಮಂಡಲ್ ಆಯೋಗದ ವರದಿ ಮೂಲಕ ಉದ್ಯೋಗದಲ್ಲಿಯೂ ಮೀಸಲಾತಿಯನ್ನು ವಿಸ್ತೃರಿಸಿದ್ದು, 1990 ರ ಅವಧಿಯಲ್ಲಿ ಬೌದ್ಧರಿಗೂ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದು, ಅಂಬೇಡ್ಕರ್ ಜಯಂತಿಯನ್ನು ಸಾರ್ವಜನಿಕ ರಜೆಯಾಗಿ ಘೋಷಿಸಿದ್ದು, ಹಾಗೂ 1989ರ ಎಸ್ಸಿ/ಎಸ್ಟಿ ಮೇಲಿನ ದೌರ್ಜನ್ಯ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ಮಹತ್ವದ ಪಾತ್ರವನ್ನು ವಹಿಸಿದ್ದು, ಇವೆಲ್ಲ ಪಾಸ್ವಾನ್ ಅವರ ಸ್ಮರಣೀಯ ಕೊಡುಗೆಗಳಾಗಿವೆ.ಇದಲ್ಲದೆ 1991 ರಲ್ಲಿನ ಸುಂದೂರ್ ದಲಿತರ ಹತ್ಯಾಕಾಂಡ ,ಹಾಗೂ ಸುಪ್ರೀಂಕೋರ್ಟ್ ನಲ್ಲಿನ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬೆಂಬಲವಾಗಿ ನಿಂತಿದ್ದೆಲ್ಲವೂ ಕೂಡ ಪಾಸ್ವಾನ್ ಅವರಿಗೆ ಸಾಮಾಜಿಕ ನ್ಯಾಯದ ಬಗೆಗಿದ್ದ ಕಳಕಳಿಯನ್ನು ತೋರಿಸುತ್ತದೆ. ಅವರ ಇಂತಹ ಮಹತ್ವದ ಕಾರ್ಯಗಳಿಗಾಗಿ ಬಹುಜನ ನಾಯಕ ಕಾನ್ಶಿರಾಮ್ ರಂತವರು ಕೂಡ ಪಾಸ್ವಾನ್ ರನ್ನು ಗೌರವದಿಂದ ಕಾಣುತ್ತಿದ್ದರು.
ರಾಜಕೀಯದಲ್ಲಿ ಅವರ ಬಣ ಯಾವುದೇ ಇರಲಿ ಅಥವಾ ಯಾವುದೇ ಪಕ್ಷದ ಪರವಾಗಿರಲಿ ದಲಿತರು, ಹಿಂದುಳಿದವರು, ಆದಿವಾಸಿಗಳು ಹಾಗೂ ಶೋಷಿತ ಸಮುದಾಯಗಳ ಪರವಾದ ಅವರ ಸಾಮಾಜಿಕ ನ್ಯಾಯದಲ್ಲಿನ ನಂಬಿಕೆ ಪ್ರಶ್ನಾತೀತವಾಗಿತ್ತು. ಅವರು ಸೈದ್ದಾಂತಿಕವಾಗಿ ಭಿನ್ನವಾಗಿರುವ ಬಿಜೆಪಿ ಸರ್ಕಾರದ ಭಾಗವಾಗಿದ್ದರೂ ಕೂಡ ನಿರಂತರವಾಗಿ ಶೋಷಿತರ ಪರವಾಗಿ ಧ್ವನಿ ಎತ್ತುತ್ತಿದ್ದರು.ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ 2018 ರ ಮಾರ್ಚ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) 1989 ಕಾಯ್ದೆಗೆ ಹಿನ್ನಡೆಯಾದಾಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆ ಕಾಯ್ದೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.ಆದ್ದರಿಂದ ಈ ಎಲ್ಲ ಕಾರಣಕ್ಕಾಗಿ ರಾಮ್ ವಿಲಾಸ್ ಪಾಸ್ವಾನ್ ಸ್ವತಂತ್ರ ಭಾರತದ ರಾಜಕೀಯ ಅಧ್ಯಾಯದಲ್ಲಿ ವಿಶಿಷ್ಟ ರಾಜಕಾರಣಿಯಾಗಿ ಉಳಿಯುತ್ತಾರೆ.