ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರ ಅಶ್ರುತರ್ಪಣ

ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ನವದೆಹಲಿಯಲ್ಲಿ ಬುಧವಾರ ನಿಧನರಾದರು. ಸೆಪ್ಟೆಂಬರ್ 11 ರಂದು ಕೋವಿಡ್ -19 ಪರೀಕ್ಷಿಸಿದ್ದರು. ಮೃತರಿಗೆ ಪತ್ರಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

Last Updated : Sep 23, 2020, 10:40 PM IST

Trending Photos

ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರ ಅಶ್ರುತರ್ಪಣ title=
file photo

ಬೆಂಗಳೂರು: ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ನವದೆಹಲಿಯಲ್ಲಿ ಬುಧವಾರ ನಿಧನರಾದರು. ಸೆಪ್ಟೆಂಬರ್ 11 ರಂದು ಕೋವಿಡ್ -19 ಪರೀಕ್ಷಿಸಿದ್ದರು. ಮೃತರಿಗೆ ಪತ್ರಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಸುರೇಶ್ ಅಂಗಡಿ ಅವರು ಬೆಳಗಾವಿಯಿಂದ ನಾಲ್ಕನೇ ಅವಧಿಯ ಲೋಕಸಭಾ ಸದಸ್ಯರಾಗಿದ್ದರು, 2004 ರಿಂದಲೂ ಸತತವಾಗಿ ಗೆದ್ದಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರು ನೂತನ ಸರ್ಕಾರದಲ್ಲಿ ಕೇಂದ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಕಳೆದ 10 ದಿನಗಳಲ್ಲಿ ಕೊರೊನಾ ದಿಂದ ಮೃತಪಟ್ಟ ರಾಜ್ಯದ ಎರಡನೇ ಸಂಸದರಾಗಿದ್ದಾರೆ. ಸುಮಾರು ಒಂದು ವಾರದ ಹಿಂದೆ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರು ಸಂಸತ್ತಿನ ಅಧಿವೇಶನಕ್ಕೆ ಹಾಜರಾಗುವ ಮೊದಲೇ ಕೋವಿಡ್ -19 ಸೋಂಕಿಗೆ ಒಳಗಾದರು.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ನೀಡಿದ ಸಂದೇಶದಲ್ಲಿ ಅಂಗಡಿ ಅವರನ್ನು "ಕರ್ನಾಟಕದಲ್ಲಿ ಪಕ್ಷವನ್ನು ಸದೃಢಗೊಳಿಸಲು ಶ್ರಮಿಸಿದ ಅಸಾಧಾರಣ ಕಾರ್ಯಕರ್ತ" ಎಂದು ಬಣ್ಣಿಸಿದ್ದಾರೆ. ಅವರು ಸಮರ್ಪಿತ ಸಂಸದ ಮತ್ತು ಪರಿಣಾಮಕಾರಿ ಸಚಿವರಾಗಿದ್ದರು, ಎಲ್ಲರಿಂದಲೂ  ಮೆಚ್ಚುಗೆ ಪಡೆದಿದ್ದರು. ಅವರ ನಿಧನವು ದುಃಖಕರ' ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಅಂಗಡಿಯ ಹಠಾತ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದರು.'ಹಿರಿಯ ನಾಯಕರು, ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಸಭ್ಯ, ಸೌಮ್ಯ ಸ್ವಭಾವದವರಾಗಿ, ಜನಪ್ರಿಯ ನಾಯಕರಾಗಿದ್ದ ಸುರೇಶ್ ಅಂಗಡಿಯವಾರ ನಿಧನ, ಪಕ್ಷಕ್ಕೆ, ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ  ಟ್ವೀಟ್ ಮಾಡಿ" ಆತ್ಮೀಯರು, ಕೇಂದ್ರದ ರೈಲ್ವೆ ರಾಜ್ಯ ಸಚಿವರಾದ ಶ್ರೀ ಸುರೇಶ ಅಂಗಡಿ  ಅವರ ನಿಧನ ತೀವ್ರ ಅಘಾತವನ್ನುಂಟು ಮಾಡಿದೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಂತಾಪ ಸೂಚಿಸಿದ್ದಾರೆ.

"ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಾವು ಆಘಾತಕಾರಿಯಾದುದು. ಸ್ನೇಹಜೀವಿಯಾಗಿದ್ದ ಸುರೇಶ್ ಅಂಗಡಿ ರಾಜ್ಯದ ಅಭಿವೃದ್ದಿ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು,ಅವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ" ಬೆಳಗಾವಿ ಸಂಸದರು, ಕೇಂದ್ರ ರೈಲ್ವೆ ರಾಜ್ಯ ಸಚಿವರೂ ಆದ ಸುರೇಶ್ ಅಂಗಡಿ ಅವರು ವಿಧಿವಶರಾದದ್ದು ತೀವ್ರ ದಿಗ್ಭ್ರಮೆಯನ್ನುಂಟು ಮಾಡಿದೆ.ಸತತ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಅವರು ಈ ಬಾರಿ ಕೇಂದ್ರದಲ್ಲಿ  ರೈಲ್ವೆ ಖಾತೆ ರಾಜ್ಯಸಚಿವರಾಗಿ ರಾಜ್ಯದ ರೈಲ್ವೆ ಸಾರಿಗೆ ಅಭಿವೃದ್ದಿಯ ಕನಸುಗಳನ್ನು ಹೊಂದಿದ್ದರು. ದುರಾದೃಷ್ಟ ಕೊರೋನಾ ಸೋಂಕಿನಿಂದ ನಮ್ಮನ್ನಗಲಿರುವುದು. ರಾಜ್ಯದ ಅಭಿವೃದ್ಧಿಯ ಮಾರ್ಗವೊಂದು ಕಡಿತಗೊಂಡಂತಾಗಿದೆ.ಸುರೇಶ್ ಅಂಗಡಿ ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು  ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ' ಎಂದು ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.

 

Trending News