ಬೆಂಗಳೂರು: 2013-18ರ ಅವಧಿಯಲ್ಲಿ ಹಿಂದೂಗಳ ಹತ್ಯೆಯಾಗಿತ್ತು ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತೀರುಗೇಟು ನೀಡಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರೇ, 2013-18ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45. ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ.
2013-18ರ ಅವಧಿಯಲ್ಲಿ ಕೋಮುಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ 10 ಹಿಂದುಗಳ ಹತ್ಯೆಯ ಆರೋಪಿಗಳು ಎಸ್ಡಿಪಿಐ, ಪಿಎಫ್ಐ ಸಂಘಟನೆಯವರಾದರೆ, 11 ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಯವರು. ಈಗ ಹೇಳಿ ಯಾವುದನ್ನು ನಿಷೇಧಿಸುತ್ತೀರಿ?
ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ಬಿಜೆಪಿಯವರು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ ನಳಿನ್ ಕುಮಾರ್ ಅವರೇ?
ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನಳಿನ್ ಕುಮಾರ್ ಅವರೇ, ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆಯ ಪ್ರಕರಣ ತನಿಖೆಯನ್ನು ಸಿಬಿಐ ನಡೆಸುತ್ತಿದೆ, ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಹಿಂದು ಪರೇಶ್ ಮೇಸ್ತನ ಕುಟುಂಬಕ್ಕೆ ನ್ಯಾಯ ಯಾವಾಗ ಕೊಡಿಸುವಿರಿ? ಹಿಂದುಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನೀವು, ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳು ಯಾರೆಂದು ತಿಳಿಸುವಿರಾ?
ಹಿಂದು ಧರ್ಮಕ್ಕೆ ಸೇರಿರುವ ಮಂಗಳೂರಿನ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನಿಮ್ಮ ಖಾಸಾ ದೋಸ್ತ್ ನರೇಶ್ ಶೆಣೈಯನ್ನು ರಕ್ಷಿಸುತ್ತಿರುವವರು ಯಾರೆಂದು ತಿಳಿಸುವಿರಾ? ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯ ಕೊಡಿಸುತ್ತೀರಿ?
ಬುದ್ದಿವಂತರ ಜಿಲ್ಲೆ ಎಂಬ ದಕ್ಷಿಣಕನ್ನಡದ ಖ್ಯಾತಿಗೆ ಅಸೂಯೆಪಟ್ಟು ಬಿಜೆಪಿ ವರಿಷ್ಠರು, ನಳಿನ್ ಕುಮಾರ್ ಕಟೀಲ್ ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರಬಹುದು, ಇಲ್ಲವೇ ಪಕ್ಷದಲ್ಲಿ ಈ ಮಟ್ಟದ ಬೌದ್ದಿಕ ದಾರಿದ್ರ್ಯ ಇದ್ದಿರಬಹುದು.