ಬೆಂಗಳೂರು: ರಾಜ್ಯದಲ್ಲಿ ಶರವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕೋವಿಡ್ -19 (Covid-19) ವೈರಸ್ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೆ ತಿಂಗಳು 14ರ ರಾತ್ರಿ 8 ಗಂಟೆ ಯಿಂದ ಲಾಕ್ಡೌನ್ (Lockdown) ಜಾರಿ ಮಾಡಿರುವುದು ಸ್ವಾಗತಾರ್ಹ. ಇದರ ಜೊತೆಗೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲು ಮಾಧ್ಯಮಗಳ ಮುಖೇನ ರಾಜ್ಯ ಸರ್ಕಾರವನ್ನು ನಾನು ಆಗ್ರಹಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರು ಸಲಹೆ ನೀಡಿದ್ದಾರೆ.
ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ (HD Devegowda) ಅವರು, 'ರಾಜ್ಯದ ಜನತೆಯ ಜೊತೆಗೆ ನಮ್ಮ ಇಡಿ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ಆರೋಗ್ಯವೇ ಭಾಗ್ಯ. ಆದ್ದರಿಂದ ದಯವಿಟ್ಟು ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಏನನ್ನೇ ಮುಟ್ಟಬೇಕೆನಿಸಿದರೂ ಸ್ಯಾನಿಟೈಸರ್ ನಿಂದ ಕೈ ಅನ್ನು ಸ್ವಚ್ಛ ಗೊಳಿಸಿ ನಂತರ ಮುಟ್ಟಿ, ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರಗಡೆ ಬನ್ನಿ' ಎಂದು ತಿಳಿಸಿದ್ದಾರೆ.
ಗಮನಿಸಿ! ನಿಮ್ಮ ನಗರದಲ್ಲಿ ಮತ್ತೆ ಲಾಕ್ಡೌನ್ ಜಾರಿಯಾಗಬಹುದು, ಕಾರಣ...?
ಇನ್ನೊಂದು ಪ್ರಮುಖವಾದ ವಿಷಯ ಈ ಮಹಾಮಾರಿ ಕರೋನಾವೈರಸ್ (Coronavirus) ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ. ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರುಗಳು ಆಪಾದಿಸುತ್ತಿದ್ದಾರೆ. ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಲಿ. ಈಗ ನಮಗೆ ಜನತೆಯ ಆರೋಗ್ಯ ಮುಖ್ಯ. ಮೊದಲು ನಾವೆಲ್ಲಾ ಅದರ ಕಡೆ ಗಮನ ಹರಿಸೋಣ. ಸರ್ಕಾರವು ಸಹ ಇದರ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವೆಲ್ಲ ಜೊತೆಗಿದ್ದೀವಿ. ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಆಡುವುದು ಬೇಡ. ದಯವಿಟ್ಟು ಇನ್ನು ಮುಂದಾದರು ಎಚ್ಚೆತ್ತುಕೊಂಡು ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.