Kannappa: ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ, ಮೋಹನ್ ಬಾಬು ನಿರ್ಮಾಣದ, ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಹಾಗೂ ವಿಷ್ಣು ಮಂಚು ನಾಯಕರಾಗಿ ನಟಿಸಿರುವ "ಕಣ್ಣಪ್ಪ" ಚಿತ್ರದ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ನಾಯಕ ವಿಷ್ಣು ಮಂಚು, ನಟ - ನೃತ್ಯ ನಿರ್ದೇಶಕ ಪ್ರಭುದೇವ, ನಟ ಶರತ್ ಕುಮಾರ್, ಕರ್ನಾಟಕದಲ್ಲಿ ಚಿತ್ರವನ್ನು ವಿತರಣೆ ಮಾಡುತ್ತಿರುವ ರಾಕ್ ಲೈನ್ ವೆಂಕಟೇಶ್ ಹಾಗೂ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಚಿತ್ರದ ಕುರಿತು ಮಾತನಾಡಿದರು.
ಚಿತ್ರದ ಕುರಿತು ಮಾತನಾಡಿದ ನಾಯಕ ವಿಷ್ಣು ಮಂಚು, ಇಂತಹ ಹಿರಿಯರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವ ವಿಷಯ ಖುಷಿ ತಂದಿದೆ. ‘ಕಣ್ಣಪ್ಪ’ ಚಿತ್ರದ ಪ್ರಚಾರ ಯಾಕೆ ನಾವು ಕರ್ನಾಟಕದಿಂದ ಪ್ರಾರಂಭಿಸಿದೆವು ಎಂಬುದಕ್ಕೆ ಕಾರಣವಿದೆ. ಕಣ್ಣಪ್ಪನ ಕಥೆ ಶತಶತಮಾನಗಳು ಹಿಂದಿನದ್ದಾದರೂ ಅದು ಜನಪ್ರಿಯವಾಗಿದ್ದು, ಡಾ. ರಾಜಕುಮಾರ್ ಅವರಿಂದ. ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಅವರು ಮೊದಲು ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಶಿವರಾಜಕುಮಾರ್ ಅವರು ಸಹ ಕಣ್ಣಪ್ಪನ ಪಾತ್ರವನ್ನು ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಮಾಡಿದರು. ತೆಲುಗಿನಲ್ಲಿ ಕೃಷ್ಣಂರಾಜು ಅಭಿನಯದಲ್ಲಿ ಕಣ್ಣಪ್ಪನ ಕುರಿತು ಒಂದು ಚಿತ್ರ ಬಂದಿತ್ತು. 50 ವರ್ಷಗಳ ನಂತರ ಪುನಃ ತೆಲುಗಿನಲ್ಲಿ ನಾವು ಕಣ್ಣಪ್ಪನ ಕಥೆಯನ್ನು ಮರುಸೃಷ್ಟಿ ಮಾಡಿದ್ದೇವೆ. ಕಣ್ಣಪ್ಪ ಶಿವಭಕ್ತನಾದ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ, ಅದಕ್ಕೂ ಮೊದಲು ಆತ ಯಾಕೆ ನಾಸ್ತಿಕನಾಗಿದ್ದ, ತಂದೆಯ ಜೊತೆಗೆ ಅವನ ಸಂಬಂಧ ಹೇಗಿತ್ತು ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇಲ್ಲಿಂದ ಪ್ರಚಾರ ಆರಂಭ ಮಾಡಲು ಮತ್ತೊಂದು ಕಾರಣ, ನಮ್ಮ ಕುಟುಂಬದ ಆತ್ಮೀಯರಾಗಿದ್ದ ಅಂಬರೀಶ್ ಅಂಕಲ್ ಅವರ ಊರು ಸಹ ಇದು. ಇವತ್ತು ಅವರಿದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ಇನ್ನು ನಮ್ಮ ಚಿತ್ರದಲ್ಲಿ ನಮ್ಮ ತಂದೆ ಮೋಹನ್ ಬಾಬು, ಖ್ಯಾತ ನಟರಾದ ಮೋಹನ್ ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಶರತ್ ಕುಮಾರ್, ದೇವರಾಜ್, ಸಾಧುಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಇವರೆಲ್ಲಾ ಅಭಿನಯಿಸಿರುವುದು ನಮ್ಮ ತಂದೆಯವರ ಮೇಲಿನ ವಿಶ್ವಾಸದಿಂದ. ರಾಕ್ ಲೈನ್ ವೆಂಕಟೇಶ್ ಅವರು ಸಹ ನನ್ನ ಜೊತೆಗಿರುತ್ತಾರೆ ಎಂದರು.
ಆಂಜನೇಯ, ಶ್ರೀ ಕೃಷ್ಣದೇವರಾಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ. ರಾಜಕುಮಾರ್ ಹುಟ್ಟಿದ ನಾಡಿಗೆ ಪ್ರಣಾಮಗಳು. ಡಾ. ರಾಜಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು. ನಮಗೆ ‘ಕಣ್ಣಪ್ಪ’ ಚಿತ್ರ ಮಾಡಲು ಅದು ದೊಡ್ಡ ಸ್ಫೂರ್ತಿ. ನಾನು ಆ ಚಿತ್ರವನ್ನು ನೋಡಿದ್ದೇನೆ. ಆ ಚಿತ್ರದಲ್ಲಿ ಡಾ. ರಾಜಕುಮಾರ್ ಅವರ ಅಭಿನಯ ಎಂತಹ ಕಲಾವಿದರಿಗೂ ದೊಡ್ಡ ಸವಾಲು. ಅದನ್ನು ಮರುಸೃಷ್ಟಿಸುವುದು ಸಹ ಸವಾಲು. ದೊಡ್ಡ ಕಲಾವಿದರ ಮತ್ತು ತಂತ್ರಜ್ಞರ ಬಳಗದ ಸಹಾಯದಿಂದ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಾಗಿದೆ. ಶಿವನ ಭಕ್ತನ ಕುರಿತಾದ ಒಂದು ಚಿತ್ರ ಮಾಡುವುದರ ಜೊತೆಗೆ ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸಿದವರು ವಿಷ್ಣು ಮಂಚು ಮತ್ತು ಡಾ. ಮೋಹನ್ ಬಾಬು. ನಾವು ನಮ್ಮ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡಿದ್ದೇವೆ. ಪ್ರೇಕ್ಷಕರರು ಈ ಚಿತ್ರಕ್ಕೆ ತಮ್ಮ ಪ್ರೀತಿ ಮತ್ತು ಪ್ರೋತ್ಸಾಹವನ್ನು ತೋರಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಹೇಳಿದರು.
ನಾನು ಮೋಹನ್ ಬಾಬು ಹಾಗೂ ಅಂಬರೀಶ್ ಅವರ ಗೆಳೆತನವನ್ನು ಹತ್ತಿರದಿಂದ ನೋಡಿರುವವನು. ಅವರಿಬ್ಬರು ಅಷ್ಟು ಆತ್ಮೀಯರು. ನನ್ನ ಮೇಲೂ ಅವರಿಗೆ ತುಂಬಾ ಆತ್ಮೀಯತೆ. ಇತ್ತೀಚೆಗೆ ಫೋನ್ ಮಾಡಿ ನನ್ನನ್ನು ಕರೆದು ಈ ಚಿತ್ರವನ್ನು ತೋರಿಸಿದರು. ಇನ್ನೂ ಆರ್ ಆರ್ ಆಗಿಲ್ಲ . ಹಾಗೆ ಚಿತ್ರ ನೋಡಿದ್ದೇನೆ. ಈ ಚಿತ್ರ ನೋಡಿ ನಾನು ಸ್ವಲ್ಪ ಹೊತ್ತು ಮಾತನಾಡಕ್ಕೆ ಆಗಲಿಲ್ಲ. ಅಷ್ಟು ಅದ್ಭುತವಾಗಿ ಈ ಸಿನಿಮಾ ಮೂಡಿಬಂದಿದೆ. ಭಾರತದ ಹೆಸರಾಂತ ನಟರು ಈ ಚಿತ್ರದಲ್ಲಿ ನಟಿಸಿದ್ದು, ನಾವು ನಿರೀಕ್ಷೆ ಮಾಡಿರದ ಪಾತ್ರಗಳಲ್ಲಿ ಅವರನ್ನು ನೋಡಬಹುದು. ಈ ಚಿತ್ರ ಏಪ್ರಿಲ್ 25 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ನಾನು ವಿತರಣೆ ಮಾಡುತ್ತಿದ್ದೇನೆ ಎಂದರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್.
ಈ ಸಿನಿಮಾದಲ್ಲಿ ನಾನು ನಟಿಸಿಲ್ಲ. ಮೂರು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದೇನೆ. ನಾನು ಈ ಜಾನರ್ ನ ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿರುವುದು ಅಪರೂಪ. ಮೋಹನ್ ಬಾಬು ಹಾಗೂ ವಿಷ್ಣು ಮಂಚು ಅವರು ನನ್ನ ಹತ್ತಿರ ಮಂಡಿಸಿದ್ದಾರೆ. ನನಗೂ ಭಕ್ತಿಪ್ರಧಾನ ಈ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿರುವುದು ತುಂಬಾ ಖುಷಿಯಾಗಿದೆ ಎಂದರು ಪ್ರಭುದೇವ.
ನಾನು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಮಾತನಾಡಿದ ನಟ ಶರತ್ ಕುಮಾರ್, ನನ್ನ ಅಭಿನಯದ ಹೆಚ್ಚಿನ ಭಾಗದ ಚಿತ್ರೀಕರಣ ನ್ಯೂಜಿಲೆಂಡ್ ನಲ್ಲಿ ನಡೆದಿದೆ. ಚಿತ್ರೀಕರಣದ ಅನುಭವ ನಿಜಕ್ಕೂ ಅವಿಸ್ಮರಣೀಯ. "ಕಣ್ಣಪ್ಪ" ಇಡೀ ಭಾರತೀಯರು ಹೆಮ್ಮೆ ಪಡುವ ಚಿತ್ರವಾಗಲಿದೆ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.