ನವದೆಹಲಿ: ಅಸ್ಸಾಂ (Assam) ನ ಬರಾಕ್ ಕಣಿವೆ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಇಪ್ಪತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಗಳವಾರ ಮುಂಜಾನೆ ಭೂಕುಸಿತದಿಂದಾಗಿ ಕರಿಮ್ಗಂಜ್ ಜಿಲ್ಲೆಯಲ್ಲಿ ಕನಿಷ್ಠ ಆರು ಜನರು, ಕ್ಯಾಚರ್ ಮತ್ತು ಹೈಲಕಂಡಿ ಜಿಲ್ಲೆಗಳಲ್ಲಿ ತಲಾ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ನಲ್ಬಾರಿ, ಗೋಲ್ಪಾರ, ನಾಗಾನ್, ಹೊಜೈ, ಪಶ್ಚಿಮ ಕಾರ್ಬಿ ಆಂಗ್ಲಾಂಗ್, ದಿಬ್ರುಗಡ ಮತ್ತು ಟಿನ್ಸುಕಿಯಾ ಜಿಲ್ಲೆಗಳ 356 ಗ್ರಾಮಗಳಲ್ಲಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಲಕ್ಷಾಂತರ ಜನರು ಇದರಿಂದಾಗಿ ಬಾಧಿತರಾಗಿದ್ದಾರೆ.
ಪ್ರವಾಹವು ಇಲ್ಲಿಯವರೆಗೆ 2,678 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳನ್ನು ಹಾನಿಗೊಳಿಸಿದೆ ಮತ್ತು 44,331 ಸಾಕು ಪ್ರಾಣಿಗಳು ಮತ್ತು 9,350 ಕೋಳಿಗಳಿಗೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.