ನವದೆಹಲಿ:ದೇಶಾದ್ಯಂತ ಮುಂದುವರೆದಿರುವ ಲಾಕ್ ಡೌನ್ ನಡುವೆ, ಕೇಂದ್ರ ಸರ್ಕಾರ ಮಹಿಳಾ ಜನ್-ಧನ್ ಖಾತೆದಾರರಿಗೆ 500 ರೂಪಾಯಿಗಳ ಮತ್ತೊಂದು ಕಂತನ್ನು ವರ್ಗಾಯಿಸಿವುದರ ಜೊತೆಗೆ ಬಿಕ್ಕಟ್ಟಿನ ನಡುವೆದೇಶದ ಬಡ ಜನರಿಗೆ ಸರ್ಕಾರ ಆರ್ಥಿಕ ಸಹಾಯ ಮಾಡುತ್ತಿದೆ. ಒಂದು ವೇಳೆ ನೀವೂ ಕೂಡ ಜನ್-ಧನ್ ಖಾತೆ ಹೊಂದಿದ್ದರೆ, ಅಥವಾ ಸದ್ಯ ಚಾಲ್ತಿಯಲ್ಲಿರುವ ನಿಮ್ಮ ಖಾತೆಯನ್ನು ಜನ್-ಧನ್ ಖಾತೆಯಾಗಿ ಬದಲಾಯಿಸಲು ಬಯಸುತ್ತಿದ್ದರೆ ಅದು ತುಂಬಾ ಸುಲಭವಾಗಿದೆ. ನಿಮ್ಮ ಹಳೆ ಖಾತೆಯನ್ನು ಜನ್-ಧನ್ ಖಾತೆಯಾಗಿ ಪರಿವರ್ತಿಸಲು ಈ ಕೆಳಗೆ ಸೂಚಿಸಿರುವ ಕ್ರಮಗಳನ್ನು ಅನುಸರಿಸಿ.
ನಿಮ್ಮ ಯಾವುದೇ ಹಳೆಯ ಉಳಿತಾಯ ಬ್ಯಾಂಕ್ ಖಾತೆಯನ್ನು ಜನ ಧನ್ ಖಾತೆಗೆ ಪರಿವರ್ತಿಸುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ನೀವು ಈ ಕೆಳಗೆ ಸೂಚಿಸಿರುವ ಹಂತಗಳನ್ನು ಅನುಸರಿಸಿ
ಹಂತ 1: ಮೊದಲು ಬ್ಯಾಂಕ್ ಶಾಖೆಗೆ ಹೋಗಿ.
ಹಂತ 2: ಅಲ್ಲಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಖಾತೆಗೆ ಬದಲಾಗಿ ರುಪೇ ಕಾರ್ಡ್ಗೆ ಅರ್ಜಿ ಸಲ್ಲಿಸಿ.
ಹಂತ 3: ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಅದನ್ನು ಬ್ಯಾಂಕಿಗೆ ಸಲ್ಲಿಸಿ.
ಹಂತ 4: ಇದರ ನಂತರ ನಿಮ್ಮ ಖಾತೆಯನ್ನು ಜನ ಧನ್ ಖಾತೆಗೆ ಪರಿವರ್ತಿಸಲಾಗುತ್ತದೆ.
ಜನ್-ಧನ್ ಖಾತೆಯ ಲಾಭಗಳು ಇಲ್ಲಿವೆ
ಪ್ರಧಾನ ಮಂತ್ರಿ ಜನ್-ಧನ್ ಖಾತೆಯ ಹಲವು ಲಾಭಗಳಿವೆ
1. ಜನ ಧನ್ ಖಾತೆಯಲ್ಲಿ ಜಮಾ ಮಾಡಿದ ಮೊತ್ತಕ್ಕೆ ಬಡ್ಡಿ ಕೂಡ ಸಿಗುತ್ತದೆ.
2. ಖಾತೆದಾರರಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಸಿಗುತ್ತದೆ.
3. ಜನ ಧನ್ ಖಾತೆದಾರ ತನ್ನ ಖಾತೆಯಿಂದ 10 ಸಾವಿರ ರೂ. ಹಣವನ್ನು ಓವರ್ಡ್ರಾಫ್ಟ್ ಮಾಡಬಹುದು. ಅಂದರೆ, ಖಾತೆಯಲ್ಲಿ ಹಣವಿಲ್ಲದಿದ್ದರೂ, ಖಾತೆದಾರ 10 ಸಾವಿರ ರೂ.ಗಳವರೆಗೆ ಹಣ ವಿಥ್ ಡ್ರಾ ಮಾಡಬಹುದು . ಆದರೆ, ಖಾತೆಯನ್ನು ತೆರೆದ ಕೆಲವು ತಿಂಗಳ ಬಳಿಕ ಅವರಿಗೆ ಈ ಸೌಲಭ್ಯ ಸಿಗಲಿದೆ.
4. ಈ ಖಾತೆಯೊಂದಿಗೆ, ಎರಡು ಲಕ್ಷ ರೂಪಾಯಿಗಳ ಅಪಘಾತ ವಿಮೆ ಉಚಿತವಾಗಿ ಸಿಗುತ್ತದೆ.
5. 30 ಸಾವಿರ ವಿಮೆಯೂ ಇದೆ. ಖಾತೆದಾರನ ಮರಣದ ನಂತರ, ಅವರ ನಾಮಿನಿಗೆ ಈ ಹಣ ಸಿಗುತ್ತದೆ.
6. ಖಾತೆದಾರರು ಈ ಖಾತೆಯ ಮೂಲಕ ವಿಮೆ ಮತ್ತು ಪಿಂಚಣಿ ಯೋಜನೆಯನ್ನು ಸುಲಭವಾಗಿ ಖರೀದಿಸಬಹುದು.
7. ಈ ಖಾತೆಯಲ್ಲಿ ಕನಿಷ್ಠ ಬಾಕಿ ಅಗತ್ಯವಿಲ್ಲ. ಒಂದು ವೇಳೆ ನೀವು ಚೆಕ್ ಬುಕ್ ಸೌಲಭ್ಯವನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಕನಿಷ್ಟ ಮೊತ್ತವನ್ನು ಕಾಯ್ದುಕೊಳ್ಳಬೇಕು.
ಹೊಸ ಖಾತೆ ತೆರೆಯಲು ಏನು ಮಾಡಬೇಕು?
ಒಂದು ವೇಳೆ ನೀವು ಹೊಸದಾಗಿ ಜನ ಧನ್ ಖಾತೆಯನ್ನು ತೆರೆಯಲು ನೀವು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಬೇಕು. ಇಲ್ಲಿ, ನೀವು ಜನ ಧನ್ ಖಾತೆ ಫಾರ್ಮ್ ಅನ್ನು ಭರ್ತಿ ಮಾಡಬೇಕು. ನಿಮ್ಮ ಎಲ್ಲ ವಿವರಗಳನ್ನು ಅದರಲ್ಲಿ ಭರ್ತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಗ್ರಾಹಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮಿನಿ, ವ್ಯವಹಾರ / ಉದ್ಯೋಗ ಮತ್ತು ವಾರ್ಷಿಕ ಆದಾಯ ಮತ್ತು ತನ್ನ ಮೇಲೆ ಅವಲಂಭಿತರಾಗಿರುವ ವ್ಯಕ್ತಿಗಳ ಸಂಖ್ಯೆ, ಎಸ್ಎಸ್ಎ ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಟೌನ್ ಕೋಡ್ ಇತ್ಯಾದಿಗಳನ್ನು ಒದಗಿಸಬೇಕು.
ಯಾವ ದಾಖಲೆಗಳು ನೀಡಬೇಕು
ಪಿಎಂಜೆಡಿವೈ ವೆಬ್ಸೈಟ್ ಪ್ರಕಾರ, ಖಾತೆ ತೆರೆಯಲು ಪಾಸ್ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಸಂಖ್ಯೆ, ಚುನಾವಣಾ ಆಯೋಗ ಹೊರಡಿಸಿದ ಮತದಾರರ ಗುರುತಿನ ಚೀಟಿ, ರಾಜ್ಯ ಸರ್ಕಾರಿ ಅಧಿಕಾರಿಯ ಸಹಿಯೊಂದಿಗೆ ಎಂಎನ್ಆರ್ಇಜಿಎ ಜಾಬ್ ಕಾರ್ಡ್ ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಜನ ಧನ್ ಖಾತೆಯನ್ನು ತೆರೆಯಬಹುದು.