ಭುವನೇಶ್ವರ: ಆಂಫಾನ್ ಚಂಡಮಾರುತದಿಂದಾಗಿ ಬಲವಾದ ಗಾಳಿ ಮತ್ತು ಭಾರಿ ಮಳೆಯಾಗುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಒಡಿಶಾ (Odisha) ಸರ್ಕಾರ ಕರಾವಳಿ ಪ್ರದೇಶಗಳಿಂದ 11 ಲಕ್ಷ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ. ಸರ್ಕಾರದ ಅಧಿಕಾರಿಗಳು ತಾತ್ಕಾಲಿಕ ಆಶ್ರಯ ಮನೆಗಳಿಗೆ ಜನರನ್ನು ಸ್ಥಳಾಂತರಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪ್ರಾರಂಭಿಸಿದೆ.
ಹವಾಮಾನ ಇಲಾಖೆಯಿಂದ ನೀಡಲಾಗಿರುವ ಚಂಡಮಾರುತದ ಎಚ್ಚರಿಕೆ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದ ಹಾಗೂ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸುವಂತೆ ಒಡಿಶಾ ವಿಶೇಷ ಪರಿಹಾರ ಆಯುಕ್ತರು ಬಾಲಸೋರ್, ಭದ್ರಾಕ್, ಕೇಂದ್ರಪಾಡ, ಜಗತ್ಸಿಂಗ್ಪುರ, ಪುರಿ, ಖೋರ್ಧಾ, ಕಟಕ್, ಜಜ್ಪುರ ಮತ್ತು ಮಯೂರ್ಭಂಜ್ ಕಲೆಕ್ಟರ್ಗಳಿಗೆ ಪತ್ರ ಬರೆದಿದ್ದಾರೆ.
ಪಶ್ಚಿಮ ಬಂಗಾಳ (West bengal)ದಲ್ಲಿ, ಪೂರ್ವ ಮಿಡ್ನಾಪೋರ್ ಜಿಲ್ಲೆಯ ದಕ್ಷಿಣ 24-ಪರಗಣ ಮತ್ತು ಸುಂದಾದ ಕರಾವಳಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ. ಆಂಫಾನ್ ಚಂಡಮಾರುತದ ಬಗ್ಗೆ ಜನರಿಗೆ ಮಾಹಿತಿ ನೀಡಲು ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಅತ್ಯಂತ ತೀವ್ರವಾದ ಚಂಡಮಾರುತ (Cyclone) ಅಮ್ಫಾನ್ ಸೋಮವಾರ (ಮೇ 18) ಸೂಪರ್ ಸೈಕ್ಲೋನಿಕ್ ಚಂಡಮಾರುತವಾಗಿ ಮಾರ್ಪಟ್ಟಿದೆ ಮತ್ತು ಇದು ಭಾರತೀಯ ತೀರಗಳತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ 37 ತಂಡಗಳನ್ನು ನಿಯೋಜಿಸಿದೆ ಎಂದು ಅದರ ಮುಖ್ಯಸ್ಥ ಎಸ್ಎನ್ ಪ್ರಧಾನ್ ತಿಳಿಸಿದ್ದಾರೆ.
ಬುಧವಾರ ಸಂಜೆ ರಾಜ್ಯದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವಿನ ಭೂಕುಸಿತದ ಸಂದರ್ಭದಲ್ಲಿ ಚಂಡಮಾರುತವು ತನ್ನ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತದೆ ಮತ್ತು ನಂತರ ಅದು ಪಶ್ಚಿಮ ಬಂಗಾಳದ ತೀರ ಪ್ರದೇಶಗಳಿಗೆ ಬಂದಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಈ ಎಚ್ಚರಿಕೆ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ "ಆರೆಂಜ್ ಅಲರ್ಟ್" ಬಿಡುಗಡೆ ಮಾಡಿದ ಐಎಂಡಿ (IMD) ಕೋಲ್ಕತಾ, ಹೂಗ್ಲಿ, ಹೌರಾ, ದಕ್ಷಿಣ ಮತ್ತು ಉತ್ತರ 24 ಪರಗಣ ಮತ್ತು ಪೂರ್ವ ಮಿಡ್ನಾಪೋರ್ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗುವ ಎಚ್ಚರಿಕೆ ನೀಡಿದೆ.
ಹೆಚ್ಚುತ್ತಿರುವ COVID-19 ಸಾವುಗಳು ಮತ್ತು ಪ್ರಕರಣಗಳೊಂದಿಗೆ ಹಿಡಿತ ಸಾಧಿಸುತ್ತಿರುವ ಸಮಯದಲ್ಲಿ ಸನ್ನಿಹಿತವಾದ ಸೂಪರ್ ಸೈಕ್ಲೋನ್ ಅದರ ಆತಂಕಗಳನ್ನು ಹೆಚ್ಚಿಸಿದೆ. ಈ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನವದೆಹಲಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು.
"ಆಂಫಾನ್ ಚಂಡಮಾರುತದಿಂದಾಗಿ ಪರಿಸ್ಥಿತಿಯ ಬಗ್ಗೆ ಸನ್ನದ್ಧತೆಯನ್ನು ಪರಿಶೀಲಿಸಲಾಗಿದೆ. ಪ್ರತಿಕ್ರಿಯೆ ಕ್ರಮಗಳು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ಚರ್ಚಿಸಲಾಗಿದೆ. ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇನೆ" ಎಂದು ಪಿಎಂ ನರೇಂದ್ರ ಮೋದಿ ಸಭೆಯ ನಂತರ ಟ್ವೀಟ್ ಮಾಡಿದ್ದಾರೆ.
Reviewed the preparedness regarding the situation due to cyclone ‘Amphan.’ The response measures as well as evacuation plans were discussed. I pray for everyone's safety and assure all possible support from the Central Government. https://t.co/VJGCRE7jBO
— Narendra Modi (@narendramodi) May 18, 2020