ನವದೆಹಲಿ: ಕೊರೋನಾವೈರಸ್ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಲ್ಲಿ ಯಾರಿಗಾದರೂ ಕೊರೊನಾವೈರಸ್ (Coronavirus) ಕಂಡು ಬಂದಲ್ಲಿ ರೈಲಿನಲ್ಲಿ ಅವರ ಸಂಪರ್ಕಕ್ಕೆ ಯಾರ್ಯಾರು ಬಂದಿದ್ದರು ಎಂಬುದನ್ನು ಪತ್ತೆಹಚ್ಚಲು ರೈಲ್ವೆ ಇಲಾಖೆ ಪರಿಣಾಮಕಾರಿ ಮಾರ್ಗವೊಂದನ್ನು ಕಂಡು ಹಿಡಿದಿದೆ.
ಇದರ ಭಾಗವಾಗಿ ಐಆರ್ಸಿಟಿಸಿ (IRCTC) ವೆಬ್ಸೈಟ್ನಲ್ಲಿ ಟಿಕೆಟ್ ಕಾಯ್ದಿರಿಸಿದ ಎಲ್ಲ ಪ್ರಯಾಣಿಕರ ಗಮ್ಯಸ್ಥಾನಗಳ ವಿಳಾಸಗಳ ದಾಖಲೆಯನ್ನು ರೈಲ್ವೆ ಇರಿಸಿಕೊಳ್ಳಲು ಪ್ರಾರಂಭಿಸಿದೆ, ಇದರಿಂದಾಗಿ ರೈಲ್ವೆ ಪ್ರಯಾಣಿಕರಲ್ಲಿ ಯಾರಿಗೇ ಆದರೂ ಕರೋನವೈರಸ್ ಸೋಂಕು ಕಂಡುಬಂದರೆ ಅವರೊಂದಿಗೆ ಸಂಪರ್ಕಕ್ಕೆ ಬರುವವರನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.
ಮೇ 13 ರಿಂದ ಐಆರ್ಸಿಟಿಸಿಯ ವೆಬ್ಸೈಟ್ನಲ್ಲಿ ಗಮ್ಯಸ್ಥಾನ ವಿಳಾಸವನ್ನು ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರೈಲ್ವೆ ವಕ್ತಾರ ಆರ್.ಡಿ.ಬಾಜ್ಪೈ ಅವರು ಮೇ 13 ರಿಂದ ಐಆರ್ಸಿಟಿಸಿ ಟಿಕೆಟ್ ಕಾಯ್ದಿರಿಸುವ ಎಲ್ಲ ಪ್ರಯಾಣಿಕರ ಸ್ಥಳಗಳ ವಿಳಾಸವನ್ನು ತೆಗೆದುಕೊಳ್ಳುತ್ತಿದೆ. ನಂತರ ಅಗತ್ಯವಿದ್ದಲ್ಲಿ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿರುವ ಜನರನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಕರೋನಾ ವೈರಸ್ ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಯಾವುದೇ ಬುಕಿಂಗ್ಗೆ ತಮ್ಮ ವಿಳಾಸ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಬಾಜ್ಪೈ ಹೇಳಿದರು. ಈ ಮೊದಲು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 12 ಜನರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದರು. ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹಲವು ಕ್ರಮಗಳನ್ನು ಕೈಗೊಂಡಿದೆ.