ನವದೆಹಲಿ: ಕೇಂದ್ರ ಸರ್ಕಾರದ ಸಂಯುಕ್ತ ಪ್ರೆಸ್ ಕಾನ್ಫರನ್ಸ್ ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಅರೋಗ್ಯ ಸಚಿವಾಲಯ, ಲಾಕ್ ಡೌನ್ ಬಳಿಕವೂ ಕೂಡ ದೇಶಾದ್ಯಂತ ಕೊರೊನಾ ವೈರಸ್ ನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ತಬ್ಲಿಘಿ ಜಮಾತ್ ಪ್ರಕರಣ ಬೆಳಕಿಗೆ ಬರುತ್ತಲೇ ಕೊರೊನಾ ವೈರಸ್ ಪರಕರಣಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆ ಕಂಡು ಬಂದು ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದೆ.
ಕಳೆದ ಎರಡು ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿನ ಒಟ್ಟು 647 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಲವ್ ಅಗರ್ವಾಲ್, ಈ ಪ್ರಕರಣಗಳು ಕೇವಲ ತಬ್ಲಿಘಿ ಜಮಾತ್ ಗೆ ಸಂಬಂಧಪಟ್ಟಿವೆ ಎಂದು ಹೇಳಿದ್ದಾರೆ. ಇದರಿಂದ ಕೈಗೊಳ್ಳಲಾದ ಸಿದ್ಧತೆಗಳಿಗೂ ಕೂಡ ದೊಡ್ಡ ಸವಾಲಾಗಿಯೇ ಪರಿಣಮಿಸಿವೆ ಎಂದಿದ್ದಾರೆ. ಇನ್ನೊಂದೆಡೆ ಆರೋಗ್ಯ ವಿಭಾಗದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ಕೆಲ ಘಟನೆಗಳು ಕೂಡ ನಮ್ಮ ಗಮನಕ್ಕೆ ಬಂದಿವೆ ಎಂದು ಹೇಳಿರುವ ಅವರು, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ರಾಜ್ಯಸರ್ಕಾರಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದಾರೆ.
ಸದ್ಯ ಕೇಂದ್ರ ಗೃಹ ಇಲಾಖೆ ಸುಮಾರು 960 ಜನರನ್ನು ಬ್ಲಾಕ್ ಲಿಸ್ಟ್ ಮಾಡಿದೆ. ಅಷ್ಟೇ ಅಲ್ಲ ಒಟ್ಟು 36೦ ಜನ ವಿದೇಶಗಳಿಗೆ ವಾಪಾಸಾಗಿದ್ದು, ಅವರನ್ನೂ ಕೂಡ ಬ್ಲಾಕ್ ಲಿಸ್ಟ್ ಮಾಡುವ ಪ್ರಕ್ರಿಯೆ ಕೈಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಲವ್ ಅಗರವಾಲ್, ನಿನ್ನೆಯಿಂದ ಇದುವರೆಗೆ ಕೊರೊನಾ ವೈರಸ್ ಸೋಂಕಿಗೆ ಸುಮಾರು 12 ಜನರು ಬಲಿಯಾಗಿದ್ದು, ಇವರೆಲ್ಲರೂ ಕೂಡ ತಬ್ಲಿಘಿ ಜಮಾತ್ ಸಂಘಟನೆಯ ಜೊತೆಗೆ ಸಂಪರ್ಕ ಹೊಂದಿದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ತಬ್ಲಿಘಿ ಜನರು ದೇಶದ ಒಟ್ಟು 14 ವಿವಿಧ ರಾಜ್ಯಗಳಲ್ಲಿ ಪಸರಿಸಿದ್ದು, ಇವುಗಳಲ್ಲಿ ದೆಹಲಿ, ಝಾರ್ಖಂಡ್, ಹರಿಯಾಣ, ಉತ್ತರಪ್ರದೇಶ, ಕರ್ನಾಟಕ, ಅಂಡಮಾನ್ ನಿಕೊಬಾರ್, ತೆಲಂಗಾಣ, ಮಹಾರಾಷ್ಟ್ರ, ಹಾಗೂ ಮಧ್ಯಪ್ರದೇಶ್ ರಾಜ್ಯಗಳೂ ಶಾಮೀಲಾಗಿವೆ ಎಂದು ಅವರು ಹೇಳಿದ್ದರೆ.
ಇದುವರೆಗೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನ ಒಟ್ಟು 2088 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 56 ಜನರು ಈ ಮಾರಕ ಕಾಯಿಲೆಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ 156 ಜನರು ಈ ಕಾಯಿಲೆಯಿಂದ ಚೆತರಿಸಿಕೊಂಡಿರುವುದಾಗಿಯೂ ಕೂಡ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.