ನವದೆಹಲಿ:ಕೊರೊನಾ ವೈರಸ್ ಭೀತಿಯ ಹಿನ್ನೆಲೆ ಮಾರ್ಚ್ 31ರವರೆಗೆ ದೇಶಾದ್ಯಂತ ಯಾತ್ರಿ ರೈಲುಗಳ ಸೇವೆ ಹಾಗೂ ಮುಂಬೈನಲ್ಲಿನ ಲೋಕಸ್ ಟ್ರೈನ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಡೀ ದೇಶಾದ್ಯಂತ ಇದುವರೆಗೆ ಸುಮಾರು 341 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಆರು ಜನರು ಈ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ. ಮಾರ್ಚ್ 22ರಂದು ಮುಂಬೈ ಹಾಗೂ ಪಟ್ನಾದಲ್ಲಿ ಈ ಮಾರಕ ಕಾಯಿಲೆಗೆ ತಲಾ ಒಬ್ಬರು ಅಸುನೀಗಿದ್ದಾರೆ.
ಇನ್ನೊಂದೆಡೆ ಪಂಜಾಬ್ ಸರ್ಕಾರ ಈ ವೈರಸ್ ನ ಸೋಂಕು ಹರಡುವಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಹಲವು ಜಿಲ್ಲೆಗಳನ್ನು ಮಾರ್ಚ್ 31ರವರೆಗೆ ಲಾಕ್ ಡೌನ್ ಮಾಡಲು ಆದೇಶ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ರಾಜ್ಯದ ಜಾಲಂಧರ್, ಪಟಿಯಾಲಾ, ಹೋಶಿಯಾರ್ ಪುರ್, ಕಪೂರ್ ಥಲಾ, ಭಟಿಂಡಾ ಹಾಗೂ ನವಾಂಶಹರ್ ಜಿಲ್ಲೆಗಳು ಇದರಲ್ಲಿ ಶಾಮೀಲಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ನ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.
ಪಟಿಯಾಲಾ ಮಾರ್ಚ್ 24ರವರೆಗೆ ಲಾಕ್ ಡೌನ್ ಮಾಡಲಾಗಿದ್ದರೆ, ಭಟಿಂಡಾ ಮಾರ್ಚ್ 27ರವೆರೆಗೆ ಹಾಗೂ ಹೋಶಿಯಾರ್ ಪುರ್ ಜಿಲ್ಲೆಯನ್ನು ಮಾರ್ಚ್ 25ರವರೆಗೆ ಬಂದ್ ಇಡಲಾಗಿದೆ
ಕರೋನಾ ವೈರಸ್ ನ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಅದರಲ್ಲೂ ವಿಶೇಷವಾಗಿ ಮುಂಬೈ ನಲ್ಲಿ ಈ ಮಾರಕ ರೋಗಕ್ಕೆ ಹಲವರು ಗುರಿಯಾಗಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡ ಮುಂಬೈನ ಲೈಫ್ ಲೈನ್ ಎಂದೇ ಕರೆಯಲಾಗುವ ಮುಂಬೈ ಲೋಕಲ್ ರೈಲು ಸೇವೆಯನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಲಾಗಿದೆ. ದೇಶದ ಆರ್ಥಿಕ ರಾಜಧಾನಿ ಎಂದೇ ಬಿಂಬಿತವಾಗಿರುವ ಮುಂಬೈನಲ್ಲಿ ನಿತ್ಯ ಲಕ್ಷಾಂತರ ಜನರು ಮುಂಬೈ ಲೋಕಲ್ ಸೇವೆಯನ್ನು ಬಳಸುತ್ತಾರೆ.
ರಾಜಸ್ಥಾನ ಸರ್ಕಾರ ಕೂಡ ಮಾರ್ಚ್ 31ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ, ದಿನಸಿ ಅಂಗಡಿಗಳಾಗಿರುವ ಹೈನು, ತರಕಾರಿ ಹಾಗೂ ಔಷಧಿ ಅಂಗಡಿಗಳು ಎಂದಿನಂತೆ ತೆರೆದುಕೊಳ್ಳಲಿವೆ.
ಪಶ್ಚಿಮ ಬಂಗಾಳದಲ್ಲಿಯೂ ಕೂಡ ಮಾರ್ಚ್ 31ರವರೆಗೆ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.