ಅರಾವಳ್ಳಿ: ದೇಶಾದ್ಯಂತ ಬೆಳೆಯುತ್ತಿರುವ ಧಾರ್ಮಿಕ ಗೋಡೆಯ ಮಧ್ಯೆ ಗುಜರಾತ್ನಿಂದ ಕೋಮು ಐಕ್ಯತೆಯ ಒಂದು ವಿಶಿಷ್ಟ ಉದಾಹರಣೆಯನ್ನು ಕಾಣಬಹುದು. ಇಲ್ಲಿ ಅರಾವಳ್ಳಿ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮುಸ್ಲಿಂ ಕುಟುಂಬವೊಂದು ಹಿಂದೂ ಕುಟುಂಬದ ಮಗಳ ಮದುವೆಯಲ್ಲಿ ಕನ್ಯಾದಾನ ಮಾಡಿದೆ. ಪ್ರತಿ ವರ್ಷ ರಾಖಿ ಕಟ್ಟುವ ಮೂಲಕ ಸಹೋದರನಾಗಿ ಪ್ರೀತಿ ಬಾಂಧವ್ಯದಿಂದ ಇದ್ದ ಸಂದೀಪ್ ಗಿರಿ ಗೋಸ್ವಾಮಿ ಅವರ ಮಗಳ ಮದುವೆಗೆ ಮುಸ್ಲಿಂ ವ್ಯಕ್ತಿ ಡಿ.ಎನ್. ಮಲಿಕ್ ಬಟ್ಟೆ, ಆಭರಣ ಮತ್ತು ಹಣವನ್ನು ನೀಡಿದ್ದಾರೆ.
ಅರವಳ್ಳಿ ಜಿಲ್ಲೆಯ ಬಯಾದ್ ಪ್ರದೇಶದ ರಾಡೋದರಾದಲ್ಲಿ ವಾಸಿಸುತ್ತಿರುವ ಡಿ.ಎನ್. ಮಲಿಕ್ ಅವರ ಕುಟುಂಬ ಮತ್ತು ಸಂದೀಪ್ ಗಿರಿ ಗೋಸ್ವಾಮಿಯವರ ಕುಟುಂಬವು ವರ್ಷಗಳಿಂದ ಪರಸ್ಪರ ಬಾಂಧವ್ಯದಿಂದ ಬದುಕುತ್ತಿದ್ದಾರೆ. ಸಂದೀಪ್ ಅವರ ಮಗಳು ಡಾ. ಸುಹಾನಿ ಬಾಲ್ಯದಿಂದಲೂ ತಮಗೆ ರಾಖಿಯನ್ನು ಕಟ್ಟುತ್ತಿದ್ದರು. ಹಾಗಾಗಿ ಒಬ್ಬ ಅಣ್ಣನಾಗಿ ನನ್ನ ತಂಗಿಯ ಮದುವೆಗೆ ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎಂದು ಮಲಿಕ್ ಝೀ ಮೀಡಿಯಾದೊಂದಿಗಿನ ಸಂಭಾಷಣೆಯನ್ನು ತಿಳಿಸಿದ್ದಾರೆ.
ಮಲಿಕ್ ಸುಹಾನಿಯವರಿಗೆ ಕನ್ಯಾದಾನ ಮಾಡಿದ್ದು ಮಾತ್ರವಲ್ಲ, ಅವರ ಇಡೀ ಕುಟುಂಬವು ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉಡುಗೊರೆಯಾಗಿ ಬಟ್ಟೆ, ಆಭರಣ ಮತ್ತು ನಗದು ಸಹ ನೀಡಿದೆ.
ಮುಸ್ಲಿಂ ಕುಟುಂಬ ಒಂದು ಹಿಂದೂ ಕುಟುಂಬದ ಮಗಳನ್ನು ಕನ್ಯಾದಾನ ಮಾಡಿರುವುದು ಸುತ್ತಮುತ್ತಲಿನ ಜನರಲ್ಲಿ ಚರ್ಚೆಯ ವಿಷಯವಾಗಿದೆ. ಮಲಿಕ್ ಮತ್ತು ಗೋಸ್ವಾಮಿ ಕುಟುಂಬದ ನಡುವಿನ ಒಡೆಯಲಾಗದ ಸಂಬಂಧವನ್ನು ಜನರು ಹೊಗಳುತ್ತಿದ್ದಾರೆ. ಎರಡೂ ಕುಟುಂಬಗಳು ಸಮಾಜದ ಇತರ ಜನರಿಗೆ ಕೋಮು ಐಕ್ಯತೆಗೆ ಉತ್ತಮ ಉದಾಹರಣೆ ನೀಡಿವೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.