ಬರ್ಮಿಂಗ್ಹ್ಯಾಮ್:ಎಲ್ಲರನ್ನು ಬೆಚ್ಚಿಬೀಳಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವುದು ಗ್ಯಾರಂಟಿ. ಹೈವೇವೊಂದರ ಮೇಲೆ ತನ್ನ ಕಾರಿನಲ್ಲಿ ಸಾಗುತ್ತಿದ್ದ ಯುವತಿಯ ಕಾರಿನ ವಿಂಡ್ ಸ್ಕ್ರೀನ್ ಮೇಲೆ ಆಕಸ್ಮಿಕವಾಗಿ ವಿಶಾಲವಾದ ಒಂದು ಮಂಜುಗಡ್ಡೆಯ ಪದರು ಕುಸಿದುಬಿದ್ದಿದೆ. ಆಸ್ಪತ್ರೆಯೊಂದರಲ್ಲಿ ಕೆಲಸ ಮುಗಿಸಿದ್ದ ಲೌರಾ ಸ್ಮಿತ್ ಹೆಸರಿನ ದಾಯಿಯೊಬ್ಬರು ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಅವರ ಕಾರು M6 ಹೈವೇ ಮೇಲೆ ವಿಶಾಲ ಮಂಜುಗಡ್ಡೆಯ ಪದರಿಗೆ ಮುಖಮುಖಿಯಾಗಿದೆ.
ಈ ಘಟನೆಯ ಕುರಿತು ಮಾತನಾಡಿರುವ 26 ವರ್ಷದ ಲೌರಾ ಸ್ಮಿತ್, "ನಾನು ಜೀವಂತವಾಗಿರುವುದು ನನ್ನ ಅದೃಷ್ಟ. ಘಟನೆ ನಡೆದ ವೇಳೆ ನಾನು ನನ್ನ ಕಾರನ್ನು ನಿಯಂತ್ರಣಕ್ಕೆ ತಂದಿದ್ದೇನೆ. ಕಾರಿನ ಮೇಲ್ಭಾಗದಲ್ಲಿ ಕುಸಿದ ಈ ಮಂಜಿನ ಪದರು ಬಳಿಕ ವಿಂಡ್ ಸ್ಕ್ರೀನ್ ಮೇಲೆ ಜಾರಿದೆ" ಎಂದಿದ್ದಾರೆ. ಕ್ಯಾಮರಾ ಕಣ್ಣಿಗೆ ಸೆರೆಯಾದ ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ. ಈ ಮಂಜಿನ ಪದರು ವಿಂಡ್ ಸ್ಕ್ರೀನ್ ಗೆ ಅಪ್ಪಳಿಸುತ್ತಿದ್ದಂತೆ ಕಾರು ನುಜ್ಜುಗುಜ್ಜಾಗಿರುವುದನ್ನು ನೀವು ಈ ವಿಡಿಯೋದಲ್ಲಿ ವಿಕ್ಷೀಸಬಹುದು.
ಬರ್ಮಿಂಗ್ಹ್ಯಾಮ್ ಲೈವ್ ಮಾಹಿತಿ ಪ್ರಕಾರ "ನಾನು ಹೈವೇ ಮೇಲೆ ತುಂಬಾ ವೇಗವಾಗಿ ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದೆ. ಈ ವೇಳೆ ನನ್ನ ಅದೃಷ್ಟ ನನ್ನನ್ನು ಕಾಪಾಡಿದ್ದು, ನಡೆದ ಘಟನೆಯಲ್ಲಿ ಕೇವಲ ನನ್ನ ಕಾರಿಗೆ ಮಾತ್ರ ಹಾನಿಯಾಗಿದೆ. ಈ ಘಟನೆಯನ್ನು ನೆನೆದುಕೊಂಡರೆ ಈಗಲೂ ನನ್ನ ಮೈ ಜುಮ್ಮೆನ್ನುತ್ತದೆ" ಎಂದು ಲೌರಾ ಹೇಳಿದ್ದಾರೆ. ಘಟನೆಯ ವೇಳೆ ವಾರ್ವಿಕಶೈರ್ ಪೊಲೀಸರ ಗಸ್ತು ವಾಹನ ಲೌರಾ ಅವರ ಕಾರಿನ ಹಿಂದೆ ಸಾಗುತ್ತಿತ್ತು ಎನ್ನಲಾಗಿದೆ. ಘಟನೆಯ ಬಳಿಕ ಲೌರಾ ಸಹಾಯಕ್ಕೆ ಧಾವಿಸಿರುವ ಪೊಲೀಸರು ಲೌರಾ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.