ನವದೆಹಲಿ: ಬಾಲಿವುಡ್ ನಲ್ಲಿ 'ದಬಂಗ್' ಎಂದೇ ಖ್ಯಾತಿ ಪಡೆದಿರುವ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅಭಿನಯ 'DABANGG-3' ಶುಕ್ರವಾರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಆದರೆ, ವೀಕ್ಷಕರ ಜೊತೆಗೆ ಸಮೀಕ್ಷಕರ ಭಾರೀ ಮನ್ನಣೆಗೆ ಪಾತ್ರವಾಗಿರುವ ಈ ಚಿತ್ರದ ನಿರ್ಮಾಪಕರಿಗೆ ಕಹಿಸುದ್ದಿಯೊಂದು ಪ್ರಕಟವಾಗಿದೆ. ಹೌದು, ಈ ವರದಿಗಳನ್ನು ನಂಬುವುದಾದರೆ ಈ ಚಿತ್ರ ಆನ್ಲೈನ್ ನಲ್ಲಿ ಲೀಕ್ ಆಗಿದೆ.
ಈ ಚಿತ್ರದ ಘೋಷಣೆಯಾದ ಬಳಿಕ ಸತತ ಹೆಡ್ಲೈನ್ ಬಾಚಿಕೊಂಡಿರುವ ಈ ಚಿತ್ರ 'DABANGG-3' ಆನ್ಲೈನ್ ಪೈರಸಿಗೆ ತುತ್ತಾಗಿದ್ದು, ನಮ್ಮ ಸಹಯೋಗಿ ವೆಬ್ಸೈಟ್ ಬಾಲಿವುಡ್ ಲೈಫ್ ಡಾಟ್.ಕಾಂ ನಲ್ಲಿ ಪ್ರಕಟಗೊಂಡಿರುವ ವರದಿ ಪ್ರಕಾರ, ಈ ಚಿತ್ರ ಲೀಕ್ ಆಗಿದ್ದು, ಇದೀಗ ಅಕ್ರಮ ಡೌನ್ಲೋಡ್ ಗೆ ಲಭ್ಯವಿದೆ ಎನ್ನಲಾಗಿದೆ.
ಚಿತ್ರವನ್ನು ಆನ್ಲೈನ್ ನಲ್ಲಿ ಲೀಕ್ ಮಾಡಿದವರ ಪಟ್ಟಿಯಲ್ಲಿ ಪೈರಸಿಗಾಗಿ ಕುಖ್ಯಾತವಾಗಿರುವ ತಮಿಳ್ ರಾಕರ್ಸ್ ವೆಬ್ ಸೈಟ್ ಹೆಸರು ಮುಂಚೂಣಿಯಲ್ಲಿದೆ. ಇದುವರೆಗೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 150 ಕೋಟಿ ರೂ.ಗಳಿಗೂ ಅಧಿಕ ಹಣ ಕೊಳ್ಳೆಹೊಡೆಯಲಿದೆ ಎಂಬುದನ್ನು ಅಂದಾಜಿಸಲಾಗುತ್ತಿತ್ತು. ಆದರೆ, ಸದ್ಯ ಚಿತ್ರ ಆನ್ಲೈನ್ ನಲ್ಲಿ ಲೀಕ್ ಆಗಿದ್ದು, ಇದು ಚಿತ್ರದ ಗಳಿಕೆಯ ಮೇಲೆ ಭಾರೀ ಪ್ರಭಾವವೇ ಉಂಟುಮಾಡಲಿದೆ ಎನ್ನಲಾಗಿದೆ. ತಮಿಳ್ ರಾಕರ್ಸ್ ಸೈಟ್ ತನ್ನ ಬಳಕೆದಾರರಿಗೆ ಈ ಚಿತ್ರದ ಎಚ್.ಡಿ ಪ್ರಿಂಟ್ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಕೂಡ ನೀಡಿದೆ ಎನ್ನಲಾಗಿದೆ.
ತಮಿಳ್ ರಾಕರ್ಸ್ ಹೆಸರಿನ ವೆಬ್ಸೈಟ್ ಕಳೆದ ವರ್ಷ ಭಾರೀ ಬಜೆಟ್ ನ ಚಿತ್ರಗಳನ್ನು ಆನ್ಲೈನ್ ನಲ್ಲಿ ಲೀಕ್ ಮಾಡಿದ ಕುಖ್ಯಾತಿ ಹೊಂದಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾದ '2.0', 'ಸಾಹೋ', 'ಬಾಲಾ'ಗಳಂಥಹ ಚಿತ್ರಗಳನ್ನೂ ಸಹ ಈ ಸೈಟ್ ಆನ್ಲೈನ್ ನಲ್ಲಿ ಲೀಕ್ ಮಾಡಿದೆ.
ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿರುವ 'DABANGG-3' ಚಿತ್ರಕ್ಕೆ ಪ್ರಭುದೇವ ನಿರ್ದೇಶನ ಮಾಡಿದಾರೆ. ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಹಾಗೂ ನಿಖಿಲ್ ದ್ವಿವೇದಿ ಅವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.