ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ(Shiv Sena) ಮತ್ತು ಎನ್‌ಸಿಪಿ(NCP) ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚುತ್ತಿದೆ. ಏತನ್ಮಧ್ಯೆ, ಶಿವಸೇನೆ ಕೋಟಾದಿಂದ ಕೇಂದ್ರದ ಸಚಿವರಾಗಿದ್ದ ಅರವಿಂದ ಸಾವಂತ್(Arvind Sawant) ಅವರು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಸಾವಂತ್ ಅವರು ಇಂದು ಬೆಳಿಗ್ಗೆ 11 ಗಂಟೆಗೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಸಾವಂತ್ ಸ್ವತಃ ಟ್ವೀಟ್ ಮಾಡಿ ರಾಜೀನಾಮೆ ಬಗ್ಗೆ ಮಾಹಿತಿ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ, ಸ್ಥಾನ ಹಂಚಿಕೆ ಮತ್ತು ಅಧಿಕಾರ ಹಂಚಿಕೆ ಕುರಿತು ಸೂತ್ರವನ್ನು ನಿರ್ಧರಿಸಲಾಗಿದೆ. ಈ ಸೂತ್ರವನ್ನು ಇಬ್ಬರೂ ಒಪ್ಪಿಕೊಂಡಿದ್ದರು. ಈಗ, ಈ ಸೂತ್ರವನ್ನು ನಿರಾಕರಿಸುವ ಮೂಲಕ, ಶಿವಸೇನೆಗೆ ಸುಳ್ಳು ಹೇಳುವ ಪ್ರಯತ್ನ ನಡೆಯುತ್ತಿದೆ. 'ಶಿವಸೇನೆ ಸತ್ಯದ ಪಕ್ಷ. ದೆಹಲಿ ಸರ್ಕಾರದ ಇಂತಹ ಸುಳ್ಳು ವಾತಾವರಣದಲ್ಲಿ ಏಕೆ ಇರಬೇಕು?' ಎಂದು ಸಾವಂತ್ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂಬೈನ ಅವರ ಮನೆಯಾದ 'ಮಾತೋಶ್ರೀ' ಯಲ್ಲಿ ತಡರಾತ್ರಿಯವರೆಗೂ ಸಭೆ ನಡೆಸಿದ್ದರು. ಸಭೆಯಲ್ಲಿ ಶಿವಸೇನೆ ಸರ್ಕಾರ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸುಮಾರು ಮೂರು ಗಂಟೆವರೆಗೂ ನಡೆದ ಸಭೆಯಲ್ಲಿ ಏಕನಾಥ ಶಿಂಧೆ, ಅನಿಲ್ ದೇಸಾಯಿ, ಮಿಲಿಂದ್ ನರ್ವೇಕರ್, ಆದಿತ್ಯ ಠಾಕ್ರೆ ಉಪಸ್ಥಿತರಿದ್ದರು. ಇತ್ತೀಚೆಗೆ, ಕಾಂಗ್ರೆಸ್ ತೊರೆದ ನಂತರ ಶಿವಸೇನೆಗೆ ಸೇರಿದ ಪ್ರಿಯಾಂಕಾ ಚತುರ್ವೇದಿ ಕೂಡ ಮಾತೋಶ್ರೀಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂತು. ಸಭೆ ಭಾನುವಾರ ರಾತ್ರಿ 11:00 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ಬೆಳಗಿನ ಜಾವ ಸುಮಾರು 2: 30 ಕ್ಕೆ ಕೊನೆಗೊಂಡಿತು.