ಬೆಂಗಳೂರು: ಶನಿವಾರ(ನವೆಂಬರ್ 9) ಅಯೋಧ್ಯೆ ತೀರ್ಪು ಹೊರಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶತಮಾನಗಳಿಂದಲೂ ವಿವಾದದ ಸ್ವರೂಪದಲ್ಲಿದ್ದ ಅಯೋಧ್ಯೆಯ ಭೂ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯದ ಸಂವಿಧಾನಿಕ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ. ಸುಪ್ರೀಂಕೋರ್ಟ್ ನಿಂದ ಇಂದು ಐತಿಹಾಸಿಕ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸುಪ್ರೀಂ ಕೋರ್ಟ್ ಹಾದಿಯಾಗಿ ಸಂವಿಧಾನಿಕ ಪೀಠ ಸುದೀರ್ಘವಾಗಿ ವಿಚಾರಣೆ ನಡೆಸಿ 2019ರ ಅಕ್ಟೋಬರ್ 16ರಂದು ತೀರ್ಪನ್ನು ಕಾಯ್ದಿರಿಸಿಲಾಗಿತ್ತು. ಅಂತಿಮ ಘಟ್ಟದಲ್ಲಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಾ. ಡಿ.ವೈ. ಚಂದ್ರಚೂಡ್, ಎಸ್. ಅಬ್ದುಲ್ ನಜೀರ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ಸಂವಿಧಾನ ಪೀಠವು ಇಂದು ತೀರ್ಪನ್ನು ಪ್ರಕಟಿಸಲಿದೆ.