ನವದೆಹಲಿ: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಜೆಡಿಎಸ್ ನಿರ್ಧರಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ಡಿಸೆಂಬರ್ 15ರಂದು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನು ಜೆಡಿಎಸ್ ಏಕಾಂಗಿಯಾಗಿ ಎದುರಿಸಲಿದೆ ಎಂದು ಹೇಳಿದರು.
ಎರಡೂ ಪಕ್ಷಗಳು ತಮಗೆ ಬೇಕೆಂದಾಗ ಮಾತ್ರ ನಮ್ಮನ್ನು ಬಳಸಿಕೊಳ್ಳುತ್ತಾರೆ. ಬಳಿಕ ನಮ್ಮನ್ನೇ ನಾಶ ಮಾಡಲು ಪ್ರಯತ್ನಿಸುತ್ತಾರೆ. ಮೇ 2018ರಲ್ಲಿಯೂ ಸಹ ಕಾಂಗ್ರೇಸ್ ಜೊತೆ ಮೈತ್ರಿಗೆ ನಾನು ಹಿಂಜರಿದಿದ್ದೆ. ಆದರೆ, ಪಕ್ಷದ ಮುಖಂಡರು ನನ್ನ ಮನವೊಲಿಸಿ ಸರ್ಕಾರ ರಚನೆಗೆ ಮುಂದಾದರು ಎಂದು ವಿವರಿಸಿದ ದೇವೇಗೌಡರು, ಈ ಬಾರಿ ಉಪಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಖಚಿತ ಎಂದು ತಿಳಿಸಿದರು.