ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಇನ್ನು ಮುಂದೆ ಕಬ್ಬು ಬೆಳೆಗಾರರು ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ಕಬ್ಬು ಸಾಗಿಸಲು ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಮೈಸೂರು ಭಾಗದಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಮುಚ್ಚಿರುವುದರಿಂದ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಕಬ್ಬು ಸಾಗಣೆ ವೆಚ್ಚವೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ಸರ್ಕಾರವೇ ಕಬ್ಬು ಸಾಗಣೆ ವೆಚ್ಚವನ್ನು ಭರಿಸಬೇಕು ಎಂದು ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ವಿಧಾನಪರಿಷತ್ನಲ್ಲಿ ಸರ್ಕಾರಕ್ಕೆ ಒತ್ತಾಯಿಸಿದ್ದರು.
ವಿಧಾನಪರಿಷತ್ನಲ್ಲಿ ಶನಿವಾರ ನಿಯಮ 330ಎ ಅಡಿಯಲ್ಲಿ ಜೆಡಿಎಸ್ನ ಕೆ.ಟಿ. ಶ್ರೀಕಂಠೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸಕ್ಕರೆ ಕಾರ್ಖಾನೆ ಮಾಲಿಕರೊಂದಿಗೆ ಮಾತು ಕತೆ ನಡೆಸಿ ಶೀಘ್ರವೇ ಈ ಬಗ್ಗೆ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇದೇ ವೇಳೆ ಪಾಂಡವಪುರ ಸಕ್ಕರೆ ಕಾರ್ಖಾನೆ ಹಾಗೂ ಹೊಳೆನರಸೀಪುರದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವುದನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿರುವ ಸಚಿವ ಆರ್. ಅಶೋಕ್, ಮೈಸೂರು, ಮಂಡ್ಯ, ರಾಮನಗರ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆದಿರುವ ಕಬ್ಬನ್ನು ಶೀಘ್ರವೇ ಅರಿಯುವಂತಹ ಕೆಲಸಕ್ಕೆ ಚಾಲನೆ ನೀಡಲಾಗುವುದು. ಇದಲ್ಲದೆ ಹೆಚ್ಚುವರಿ ಕಬ್ಬನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುವುದು. ಇದಕ್ಕೆ ತಗುಲುವ ಸಾಗಾಣೆ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸಲಿದೆ ಎಂದವರು ತಿಳಿಸಿದರು.