ನವದೆಹಲಿ: ಅನರ್ಹ ಶಾಸಕರಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ನ್ಯಾ. ಮೋಹನ್ ಶಾಂತನಗೌಡರ್ ಹಿಂದೆ ಸರಿದಿದ್ದು, ಸೋಮವಾರ(ಸೆ.23) ರಂದು ವಿಚಾರಣೆ ನಡೆಸಲಾಗುವುದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಜಯ್ ರಸ್ತೋಗಿ ಮತ್ತು ಮೋಹನ್ ಶಾಂತನಗೌಡರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಜಸ್ಟೀಸ್ ಮೋಹನ್ ಶಾಂತನಗೌಡರ್ ಹಿಂದೆ ಸರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.
ಕರ್ನಾಟಕ ಮೂಲದವರಾದ ನ್ಯಾ. ಮೋಹನ್ ಶಾಂತನಗೌಡರ್ ಅನರ್ಹ ಶಾಸಕರ ಪ್ರಕರಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಈಗ ಪೀಠದ ಮರುರಚನೆ ಆಗಬೇಕಿದೆ. ಇದೀಗ ಬೇರೆ ನ್ಯಾಯಮೂರ್ತಿಗಳು ಪೀಠಕ್ಕೆ ನೇಮಕ ಆಗಬೇಕಿದ್ದು, ಸುಪ್ರೀಂಕೋರ್ಟ್ ವಿಚಾರಣೆಯನ್ನು ಸೆ. 23ಕ್ಕೆ ನಡೆಸಲಿದೆ.
ಈಗಾಗಲೇ ಅರ್ಜಿ ವಿಚಾರಣೆ ತಡವಾಗಿದೆ. ಅರ್ಜಿ ವಿಚಾರಣೆ ತೆಗೆದುಕೊಳ್ಳಿ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ನ್ಯಾಯಾಲಯದಲ್ಲಿ ಮನವಿ ಮಾಡಿದರು. ನ್ಯಾಯಮೂರ್ತಿಗಳು ಒಪ್ಪದಿರುವುದರಿಂದ ಮುಂದೂಡುತ್ತಿದ್ದೇವೆ ಎಂದು ರೋಹ್ಟಗಿ ಮನವಿಗೆ ನ್ಯಾ. ಎನ್.ವಿ. ರಮಣ ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ಕರ್ನಾಟಕ ಮೂಲದವರಾದ ನ್ಯಾ. ಮೋಹನ್ ಶಾಂತನಗೌಡರ್ ವಿಚಾರಣೆ ನಡೆಸುವುದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದ ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ಆದರೂ ಕೂಡ ನ್ಯಾ. ಮೋಹನ್ ಶಾಂತನಗೌಡರ್ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಮತ್ತೆ ಮುಖ್ಯ ನ್ಯಾಯಾಧೀಶರು ಈ ಪೀಠಕ್ಕೆ ಮತ್ತೊಬ್ಬ ನ್ಯಾಯಾಧೀಶರನ್ನು ನೇಮಕ ಮಾಡಬೇಕಿದೆ.
ಸುಪ್ರೀಂ ಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ
ಪ್ರಕರಣದ ತುರ್ತು ವಿಚಾರಣೆ ಕೋರಿ ಅನರ್ಹರ ಪರ ವಕೀಲರು ಈ ಹಿಂದೆ ಮೂರು ಬಾರಿ ಮಾಡಿಕೊಂಡ ಮನವಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ತಿರಸ್ಕರಿಸಿತ್ತು.